ಏಕ ನ್ಯಾಯಾಧಿಕರಣ, ರಾಜ್ಯಗಳಿಗೆ ದೊರಕೀತೇ ನ್ಯಾಯ?: ಜಲವ್ಯಾಜ್ಯ ಇತ್ಯರ್ಥಕ್ಕೆ ನೂತನ ವ್ಯವಸ್ಥೆಗೆ ಕೇಂದ್ರ ಅನುಮೋದನೆ

kannada t-shirts

ನವದೆಹಲಿ:ಆ-2:ನ್ಯಾಯಾಧಿಕರಣಗಳು ನಿಗದಿತ ಅವಧಿಯಲ್ಲಿ ಜಲ ವ್ಯಾಜ್ಯಗಳನ್ನು ಪರಿಹರಿಸಲು ವಿಫಲವಾಗಿರುವುದರಿಂದ ಕೇಂದ್ರ ಸರ್ಕಾರ ಬುಧವಾರ ಲೋಕಸಭೆಯಲ್ಲಿ ಅನುಮೋದನೆಗೊಳಿಸಿರುವ ಏಕ ನ್ಯಾಯಾಧಿಕರಣ ವ್ಯವಸ್ಥೆ, ಅಂತಾರಾಜ್ಯ ಜಲ ವಿವಾದಗಳ ತಿದ್ದುಪಡಿ ಮಸೂದೆ ಹೊಸ ಭರವಸೆ ಹುಟ್ಟು ಹಾಕಿದೆ. ಆದರೆ, ನ್ಯಾಯಾಧಿಕರಣ ನೇಮಕಾತಿ ಸೇರಿ ಬಹುತೇಕ ವಿಷಯಗಳಿಗೆ ಸಂಬಂಧಿಸಿ ಹೆಚ್ಚಿನ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿಯೇ ಜಲವ್ಯಾಜ್ಯಗಳಿಂದ ತತ್ತರಿಸಿರುವ ರಾಜ್ಯಗಳಲ್ಲಿ ಕಳವಳ ವ್ಯಕ್ತವಾಗಿದೆ. ಇದೇ ಕಾರಣಕ್ಕಾಗಿ ತಮಿಳುನಾಡು, ಒಡಿಶಾ ಸೇರಿ ವಿವಿಧ ರಾಜ್ಯಗಳು ಸಂಸತ್ತಿನಲ್ಲಿ ಅಸಮ್ಮತಿ ಹೊರಹಾಕಿವೆ.

1956ರಲ್ಲಿ ಆರಂಭಗೊಂಡಿದ್ದ ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದ ಪರಿಹಾರ ಕಾಯ್ದೆ ಈಗಲೂ ಜಾರಿಯಲ್ಲಿದೆ. ಹೊಸ ಕಾಯ್ದೆ ಅನುಷ್ಠಾನಗೊಂಡರೆ ಜಲವ್ಯಾಜ್ಯ ನಿರ್ವಹಣೆಯ ಹಾಲಿ ವ್ಯವಸ್ಥೆ ರದ್ದಾಗುವುದರ ಜತೆಗೆ ಅಸ್ತಿತ್ವದಲ್ಲಿರುವ ನ್ಯಾಯಾಧಿಕರಣಗಳೂ ಅಪ್ರಸ್ತುತ ಎನಿಸಿಕೊಳ್ಳಲಿವೆ. ಆದರೆ, ಈಗಾಗಲೇ ನ್ಯಾಯಾಧಿಕರಣಗಳು ನೀಡಿರುವ ಐತೀರ್ಪಿನ ಅನ್ವಯ ಸ್ಥಾಪನೆಗೊಂಡಿರುವ ಪ್ರಾಧಿಕಾರಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ, ಕಾವೇರಿ ನದಿ ನೀರು ನಿರ್ವಹಣೆಗೆ ಸಂಬಂಧಿಸಿ ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ರಚನೆಗೊಂಡಿರುವ ಕಾವೇರಿ ನೀರು ಪ್ರಾಧಿಕಾರ ಮುಂದುವರಿಯಲಿದೆ. ಕೃಷ್ಣಾ ಮತ್ತು ಮಹದಾಯಿ ಜಲ ವಿವಾದ ಕುರಿತ ಐತೀರ್ಪ ಹೊರಬಿದ್ದಿದ್ದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಈ ಎರಡೂ ವಿವಾದಗಳ ಐತೀರ್ಪ ಹೊಸ ಕಾಯ್ದೆ ಅನುಷ್ಠಾನಗೊಳ್ಳುವ ಮುನ್ನ ಬಂದಿರುವುದರಿಂದ ಅಧಿಸೂಚನೆ ಪ್ರಕಟಗೊಳಿಸುವುದು ಅನಿವಾರ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಕಾವೇರಿಯಂತೆ ಈ ಎರಡೂ ನದಿಗಳ ಜಲ ಬಿಕ್ಕಟ್ಟು ನಿಭಾಯಿಸಲು ಜಲ ನಿರ್ವಹಣಾ ಪ್ರಾಧಿಕಾರ ರಚನೆಯಾಗಲಿದೆಯೇ ಅಥವಾ ಏಕ ನ್ಯಾಯಾಧಿಕರಣದಲ್ಲೇ ಇವುಗಳನ್ನು ನಿರ್ವಹಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ವಿವಿಧ ನ್ಯಾಯಾಧಿಕರಣದಲ್ಲಿ ವಿಚಾರಣೆ ಹಂತದಲ್ಲಿರುವ ವ್ಯಾಜ್ಯಗಳು ಹೊಸ ನ್ಯಾಯಾಧಿಕರಣದ ವ್ಯಾಪ್ತಿಗೆ ಬಂದು ಹಿಂದಿದ್ದ ಎಲ್ಲ ವ್ಯವಸ್ಥೆಗಳು ರದ್ದಾಗಲಿವೆ. ಒಂದುವೇಳೆ, ಮುಂದಿನ 10 ದಿನಗಳ ಒಳಗಾಗಿ ರಾಜ್ಯಸಭೆ ಒಪ್ಪಿಗೆ ಪಡೆಯಲು ಕೇಂದ್ರ ಯಶಸ್ವಿಯಾದರೆ ಮಹದಾಯಿ ಐತೀರ್ಪಿನ ಸ್ಪಷ್ಟೀಕರಣ ಕೋರಿ ನ್ಯಾಯಾಧಿಕರಣಕ್ಕೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಗಳೂ ಏಕ ನ್ಯಾಯಾಧಿಕರಣಕ್ಕೆ ವರ್ಗಾವಣೆಗೊಳ್ಳಲಿವೆ.

ಬಿಕ್ಕಟ್ಟು ನಿರ್ವಹಣೆ ಹೇಗೆ?

ಹೊಸ ಕಾಯ್ದೆ ಪ್ರಕಾರ, ರಾಜ್ಯಗಳ ನಡುವೆ ಉಂಟಾಗುವ ಜಲ ಬಿಕ್ಕಟ್ಟು ಮೊದಲಿಗೆ ಕಾರ್ಯದರ್ಶಿ ಶ್ರೇಣಿಯ ಕೇಂದ್ರ ಸರ್ಕಾರ ಅಧಿಕಾರಿ ನೇತೃತ್ವದ ಬಿಕ್ಕಟ್ಟು ಪರಿಹಾರ ಸಮಿತಿ (ಡಿಆರ್​ಸಿ) ಮುಂದೆ ಹೋಗಲಿದೆ. ಸಂಬಂಧಪಟ್ಟ ಕ್ಷೇತ್ರಗಳ ಹಿರಿಯ ತಜ್ಞರೂ ಸಮಿತಿಯಲ್ಲಿರುತ್ತಾರೆ. ಪರಿಹಾರ ಕಂಡುಕೊಳ್ಳಲು ಸಮಿತಿ ವಿಫಲವಾದಲ್ಲಿ ನ್ಯಾಯಾಧಿಕರಣಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ನ್ಯಾಯಾಧಿಕರಣ ನಿರ್ದಿಷ್ಟ ನ್ಯಾಯಪೀಠದಲ್ಲಿ ವಿಚಾರಣೆ ನಡೆಸುತ್ತದೆ. ನ್ಯಾಯಾಧಿಕರಣದ ತೀರ್ಪು ಅಂತಿಮ ಮತ್ತು ಇದು ಸುಪ್ರೀಂಕೋರ್ಟ್ ತೀರ್ಪಿಗೆ ಸಮಾನ ಎಂದೆನಿಸಿಕೊಳ್ಳಲಿದೆ. ಮತ್ತೆ ಸಮಸ್ಯೆಗಳು ಉದ್ಭವಿಸಿದಲ್ಲಿ ತೀರ್ಪಿನ ಮರುಪರಿಶೀಲನೆಗೂ ಅವಕಾಶವಿರಲಿದೆ. ಬಿಕ್ಕಟ್ಟು ನಿರ್ವಹಣೆಗೆ ಒಂದೂವರೆ ವರ್ಷದ ಗಡುವು ಇರಲಿದ್ದು, ನ್ಯಾಯಾಧಿಕರಣಕ್ಕೆ 3 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಮರುಪರಿಶೀಲನೆಗೆ (ಅಗತ್ಯವಿದ್ದರೆ) ಒಂದೂವರೆ ವರ್ಷದ ಅವಧಿ ನಿಗದಿಪಡಿಸಲಾಗಿದೆ.

ಅಧಿಸೂಚನೆ ಇಲ್ಲ

ಈವರೆಗೆ ನ್ಯಾಯಾಧಿಕರಣದ ಎಲ್ಲ ಐತೀರ್ಪಗಳು ಅನುಷ್ಠಾನಗೊಳ್ಳಬೇಕೆಂದರೆ ಕೇಂದ್ರ ಸರ್ಕಾರ ಅವುಗಳ ಅಧಿಸೂಚನೆ ಪ್ರಕಟಿಸಬೇಕಿತ್ತು. ಹೊಸ ಮಸೂದೆ ಅನ್ವಯ ಅಧಿಸೂಚನೆಯ ಅಗತ್ಯವಿರುವುದಿಲ್ಲ.

ಹೊಸ ಕಾಯ್ದೆ ಏಕೆ?

5 ವರ್ಷದ ಒಳಗಾಗಿ ನ್ಯಾಯಾಧಿಕರಣಗಳು ಜಲವ್ಯಾಜ್ಯಗಳನ್ನು ಪರಿಹರಿಸಬೇಕಿತ್ತು. ಯಾರಿಗೂ ಈ ನಿಯಮ ಪಾಲಿಸಲು ಸಾಧ್ಯವಾಗಲಿಲ್ಲ.
ನ್ಯಾಯಾಧಿಕರಣದ ಅಂತಿಮ ವರದಿ ಸಲ್ಲಿಕೆಗೆ ಸಮಯದ ಗಡುವು ಇರಲಿಲ್ಲ.
ನ್ಯಾಯಾಧಿಕರಣದ ಮುಖ್ಯಸ್ಥ, ಇತರ ಸದಸ್ಯರ ನಿವೃತ್ತಿಗೂ ಸಮಯದ ಗಡುವಿರಲಿಲ್ಲ.
ಹುದ್ದೆ ಖಾಲಿ ಇದ್ದಾಗ ಸುಪ್ರೀಂ ಮುಖ್ಯ ನ್ಯಾ. ನೇಮಕಾತಿಗೆ ಆದೇಶ ಮಾಡಬೇಕಿತ್ತು. ಈ ಪ್ರಕ್ರಿಯೆ ಮತ್ತಷ್ಟು ವಿಳಂಬಕ್ಕೆ ಕಾರಣವಾಗುತ್ತಿತ್ತು.
ಕಣಿವೆ ಪ್ರದೇಶಗಳಲ್ಲಿ ಜಲ ಸಂಗ್ರಹದ ಕುರಿತು ನಿಖರ ಮಾಹಿತಿ ಇರುತ್ತಿರಲಿಲ್ಲ.
ಶಾಶ್ವತ ನ್ಯಾಯಾಧಿಕರಣ ಸ್ಥಾಪನೆ ಒಳ್ಳೆಯ ನಿರ್ಧಾರ. ಆದರಿದು, ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರಬೇಕು. ಏಕೆಂದರೆ, ಕೇಂದ್ರ ಸರ್ಕಾರದ ಇಲಾಖೆಯಂತೆ ಕಾರ್ಯನಿರ್ವಹಿಸುವುದೆ ಎಂಬ ಅನುಮಾನವಿದೆ. ನೇಮಕಾತಿಗಳನ್ನು ನಡೆಸುವ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಬಿಟ್ಟರೆ ಉಳಿದ ನಾಲ್ವರು ಕೇಂದ್ರ ಸರ್ಕಾರಕ್ಕೆ ಸೇರಿದವರು. ತಜ್ಞರೂ ಸರ್ಕಾರದ ವ್ಯಾಪ್ತಿಗೆ ಬರುವ ಅಧಿಕಾರಿಗಳೇ ಆಗಿರುತ್ತಾರೆ. ಹೀಗಾದಾಗ, ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವ ಆತಂಕಗಳಿರುವುದಿಲ್ಲವೇ?

| ಮೋಹನ್ ಕಾತರಕಿ ರಾಜ್ಯ ಜಲವ್ಯಾಜ್ಯ ಕಾನೂನು ತಂಡದ ಹಿರಿಯ ಸದಸ್ಯರು

ನೇಮಕಾತಿ ಹೀಗೆ

ನ್ಯಾಯಾಧಿಕರಣಕ್ಕೆ ಓರ್ವ ಮುಖ್ಯಸ್ಥ, ಸಹಮುಖ್ಯಸ್ಥ ಹಾಗೂ ಮೂವರು ತಜ್ಞರನ್ನೊಳಗೊಂಡ 6 ಸದಸ್ಯರಿರುತ್ತಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ, ಕಾನೂನು ಸಚಿವ ಮತ್ತು ಕೇಂದ್ರ ಜಲಶಕ್ತಿ ಸಚಿವರನ್ನೊಳಗೊಂಡ ಸಮಿತಿಗೆ ನೇಮಕಾತಿ ನಡೆಸಲಿದೆ. ಸೆಂಟ್ರಲ್ ವಾಟರ್ ಇಂಜಿನಿಯರಿಂಗ್ ಸರ್ವೀಸ್ ಮತ್ತು ಮುಖ್ಯ ಇಂಜಿನಿಯರ್ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿರಲಿದೆ. ಮುಖ್ಯಸ್ಥರು, ಸಹಮುಖ್ಯಸ್ಥರ ವಯಸ್ಸು 70ಕ್ಕೆ ಸೀಮಿತ ಮತ್ತು ಅವರ ಅಧಿಕಾರಾವಧಿ 5 ವರ್ಷ.
ಕೃಪೆ:ವಿಜಯವಾಣಿ

ಏಕ ನ್ಯಾಯಾಧಿಕರಣ, ರಾಜ್ಯಗಳಿಗೆ ದೊರಕೀತೇ ನ್ಯಾಯ?: ಜಲವ್ಯಾಜ್ಯ ಇತ್ಯರ್ಥಕ್ಕೆ ನೂತನ ವ್ಯವಸ್ಥೆಗೆ ಕೇಂದ್ರ ಅನುಮೋದನೆ

cauvery-tribunal-dam-water-central-govt-tribunal-inter-state-river-water-tamil-nadu-karnataka

website developers in mysore