ಕಳ್ಳರ ಕೈಚಳಕ: ಮನೆ ಮುಂದೆ ನಿಲ್ಲಿಸಿದ್ದ ಕಾರ್‌ ನ ನಾಲ್ಕು ಟೈರ್‌ ಗಳು ಮಾಯ.

ಮೈಸೂರು,ಅಕ್ಟೋಬರ್,26,2021(www.justkannada.in): ನೀವೇನಾದರೂ ನಿಮ್ಮ ಮನೆಯ ಕಾಂಪೌಂಡ್  ಒಳಗಡೆ ಕಾರನ್ನು ನಿಲ್ಲಿಸಲು  ಸ್ಥಳವಿಲ್ಲವೆಂದು ಮನೆಯ ಹೊರಗಡೆ ಕಾರನ್ನು ನಿಲ್ಲಿಸುತ್ತಿದ್ದೀರಾ? ಹಾಗಾದರೆ ಜಾಗೃತರಾಗಿರಿ. ಯಾಕೆಂದರೆ ಮೈಸೂರಿನಲ್ಲಿದ್ದಾರೆ ಕಾರಿನ ಚಕ್ರ ಕಳ್ಳರು!

ಕಳೆದೆರಡು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಜೆಯಿಂದ ಮುಂಜಾನೆಯ ತನಕವೂ ಎಡೆಬಿಡದೆ ಮಳೆ  ಸುರಿಯುತ್ತಿರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಮನೆಯ ಮುಂದೆ ನಿಲ್ಲಿಸಲಾಗಿದ್ಧ ಎರಡು ಕಾರುಗಳ ನಾಲ್ಕೂ  ಚಕ್ರಗಳನ್ನು ಖತರ್ನಾಕ್ ಕಳ್ಳರು ಕದ್ದೊಯ್ದ ಘಟನೆ ಸರಸ್ವತಿಪುರಂ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೈಸೂರಿನಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಮನೆಯ ಮುಂದೆ ನಿಲ್ಲಿಸಲಾಗಿದ್ದ ವಾಹನಗಳ ಪೆಟ್ರೋಲ್ ಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳರು ಇದೀಗ  ವಾಹನಗಳ ಚಕ್ರಗಳನ್ನೇ ಕದ್ದು ಪರಾರಿಯಾಗುವಷ್ಟು ಹುಶಾರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿನ ಎರಡು ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಕಾರಿನ ಹಿಂದಿನ ಮತ್ತು ಮುಂದಿನ ಚಕ್ರಗಳನ್ನೇ ಕಳ್ಳರು ಕದ್ದೊಯ್ದಿದ್ದಾರೆ. ನಿನ್ನೆ ರಾತ್ರಿಯಿಂದ ಮಳೆ ಆರಂಭವಾಗಿತ್ತು. ಮಳೆ ಬೀಳುತ್ತಿದ್ದ ಸಮಯದಲ್ಲಿ ಮನೆಯವರೆಲ್ಲ ನಿದ್ರೆಗೆ ಜಾರಿದ ನಂತರ ಕಳ್ಳರು ಈ ಕೃತ್ಯ ಎಗಿದ್ದಾರೆ ಎನ್ನಲಾಗಿದೆ.

ಮಳೆಯು ಬೀಳುತ್ತಿದ್ದ ಕಾರಣ ಯಾವುದೇ ಸದ್ದಾಗಲ್ಲ ಎಂಬುದನ್ನು ಅರಿತೇ ಕಳ್ಳರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಒಂದು ಚಕ್ರ  6 ಸಾವಿರ ರೂ.ಬೆಲೆ ಬಾಳಲಿದ್ದು ಒಟ್ಟು 48 ಸಾವಿರ ರೂ.ಮೌಲ್ಯದ ಚಕ್ರಗಳನ್ನು ಕಳ್ಳರು ಕದ್ದೊಯ್ದಿದ್ದು, ಚಕ್ರವಿರುವ ಜಾಗದಲ್ಲಿ ಕಲ್ಲನ್ನು ತಂದು ಇರಿಸಿದ್ದಾರೆ. ಬೆಳಿಗ್ಗೆ ಮನೆಯ ಮಾಲಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  car-tires -in front of – house –thief-mysore