‘ಕ್ಯಾಮರಾ v/s ಕುವೆಂಪು’ ಚಿತ್ರಕಥಾ ಸಂಪುಟ ನಾಳೆ(ಜ.29) ಬಿಡುಗಡೆ.

ಮೈಸೂರು,ಜನವರಿ,28,2023(www.justkannada.in): ಶಾಂತವೇರಿ ಜನವೇದಿಕೆ ಕರ್ನಾಟಕ-ಮೈಸೂರು ಸಹಕಾರದಲ್ಲಿ ‘ಕ್ಯಾಮರಾ v/s ಕುವೆಂಪು’ ಚಿತ್ರ ಸಂಪುಟದ ಬಿಡುಗಡೆ ಕಾರ್ಯಕ್ರಮವನ್ನು ಮೈಸೂರು ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಜ.29ರ ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಡಾ.ಮೂಡ್ನಕೂಡು ಚಿನ್ನಸ್ವಾಮಿ ಅವರು ಕೃತಿ ಬಿಡುಗಡೆ ಮಾಡುವರು. ಬಹುಭಾಷಾ ನಟ ಪ್ರಕಾಶ್ ರಾಜ್ ಕೃತಿ ಕುರಿತು ಮಾತನಾಡುವರು. ಪ್ರಕಾಶಕರಾದ ಪ್ರೊ.ಬಿ.ಎನ್.ಶ್ರೀರಾಮ್, ಕೃಪಾಕರ- ಸೇನಾನಿ‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಸಂವೇದನಾ ಶೀಲ ವನ್ಯಜೀವಿ ಛಾಯಾಗ್ರಹಕರು, ಲೇಖಕರಾದ ಕೃಪಾಕರ – ಸೇನಾನಿ ಅವರು ಹತ್ತು ಹಲವು ಚಿತ್ರಕ ಕಥನಗಳನ್ನು ತಮ್ಮ  ‘ಕ್ಯಾಮರಾ v/s ಕುವೆಂಪು’ ಚಿತ್ರ ಸಂಪುಟದಲ್ಲಿ ದಾಖಲಿಸಿದ್ದಾರೆ. 1989ರಲ್ಲಿ ಕುವೆಂಪು ಕುರಿತು ಸಾಕ್ಷ್ಯಚಿತ್ರ ಮಾಡಬೇಕೆಂಬ ಅದಮ್ಯ ಬಯಕೆ ಹೊಂದಿದ್ದ ಈ ಜೋಡಿ, ತಮ್ಮ ವಯಸ್ಸು, ತಿಳಿವಳಿಕೆ, ಅರಿವಿನ ಸಾಮರ್ಥ್ಯ ಕ್ಕೆ ಕುವೆಂಪು ಅವರ ಬೌದ್ಧಿಕ ಆಲೋಚನೆಗಳನ್ನಾಗಲಿ,  ಚಿಂತನೆಗಳ ಒಳನೋಟಗಳನ್ನಾಗಲಿ ಗ್ರಹಿಸುವ ಪ್ರೌಢಿಮೆ ಇಲ್ಲ ಎನ್ನುವ ಕಾರಣಕ್ಕೆ ಚಿತ್ರ ಸಂಪುಟ ಮಾಡಬಹುದೆಂದು ಯೋಚಿಸಿದರಂತೆ. ಅದಕ್ಕೆ ಕುವೆಂಪು ಅವರ ಅನುಮತಿ ಸುಲಭದಲ್ಲಿ ದೊರಕಿದೆ.

ಬಳಿಕ ಕಾರ್ಯಪ್ರವೃತ್ತರಾದ ಅವರಿಗೆ ಹಲವು ಸವಾಲುಗಳು ಎದುರಾದವು. ‘ಯಾವುದಕ್ಕೂ ಧೃತಿಗೆಡದೆ ಕೆಲಸದಲ್ಲಿ ಮಗ್ನರಾದೆವು. ದಿನಗಳು ಕಳೆದಂತೆ ಎಲ್ಲವೂ ತಿಳಿಯಾಗತೊಡಗಿತು. ಮೆದುವಾಗಿ,ಮೆಲುವಾಗಿ ಕಾಡು ಹಕ್ಕಿಯೊಂದನ್ನು ಸಮೀಪಿಸಿದಂತೆ ನಮ್ಮ ಪ್ರಯತ್ನ ಸಾಗಿತ್ತು…ಕ್ರಮೇಣ , ಆ ಮೇರು ವ್ಯಕ್ತಿತ್ವದ ಕಡೆ ದಿನಗಳ ಸೂಕ್ಷ್ಮತೆಗಳು ಕಂಡೂ ಕಾಣದಂತೆ ಚಿತ್ರಗಳಲ್ಲಿ ಮೂಡಲಾರಂಭಿಸಿದವು. ಅಂತಿಮವಾಗಿ, ವಿರಾಟ್ ಮನಸ್ಸೊಂದನ್ನು ಚಿತ್ರದಲ್ಲಿ ಹಿಡಿದಿಡುವ ಪ್ರಯತ್ನದಲ್ಲಿದ್ದ ತಮಗೆ, ಆ ಚಿತ್ರಗಳಲ್ಲಿ ತಮ್ಮ ಗ್ರಹಿಕೆಯ ಪ್ರತಿಬಿಂಬವನ್ನಷ್ಟೆ ಹಿಡಿದಿಡಲು ಸಾಧ್ಯವಾಯಿತು,’ ಎನ್ನುತ್ತಾರೆ.

ಅದು ಸಾಹಿತ್ಯಲೋಕದ ಧೀಶಕ್ತಿಯ ಜೊತೆ ಕ್ಯಾಮರಾ ಮೂಲಕ ಸಂವಾದಿಸಿದ ಅವರ ವಿನಮ್ರತೆ. ಆದರೆ, ಅವರ ಕ್ಯಾಮರಾದ ಬೆರಗು ಗಣ್ಣು ಯುಗಪ್ರವರ್ತಕ ಕವಿಯ ಭಾವಲೋಕವನ್ನು ಸಮರ್ಥವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಅದರ ಫಲವಾದ ಈ ಕಪ್ಪು- ಬಿಳುಪು ಚಿತ್ರ ಸಂಪುಟವು ಓದುಗ ಮತ್ತು ನೋಡುಗನಲ್ಲಿ ಹಲವು ವರ್ಣಗಳನ್ನು ಮೂಡಿಸುತ್ತದೆ. ಕಳೆದ ಶತಮಾನದ 80-90ರ ದಶಕದಲ್ಲಿ ಸೆರೆ‌ ಹಿಡಿದ ಚಿತ್ರಗಳನ್ನು ಮತ್ತು ಅದರ ಹಿಂದಿರುವ ಕಥನಗಳನ್ನು ಮೂರು ದಶಕದ ಬಳಿಕ ಅವರು ಪ್ರಕಟ ಪಡಿಸಿದ್ದಾರೆ. ಕಪ್ಪು ಬಿಳುಪಿನ ಚಿತ್ರಗಳು ಅವೇ ಇದ್ದರೂ, ಅವುಗಳ ಜೊತೆ ಬೆಸೆದಿರುವ ಕಥನಗಳು ಈ  ಸುದೀರ್ಘ ‌ಅವಧಿಯಲ್ಲಿ  ಮಾಗಿವೆ.

ಕೃತಿಯ ಬೆನ್ನುಡಿಯಲ್ಲಿ ಡಾ.ಕೆ.ವೈ.ನಾರಾಯಣ ಸ್ವಾಮಿ ಅವರು ಹೇಳಿರುವಂತೆ, ‘ಕ್ಯಾಮರಾ ಮತ್ತು‌ ಕುವೆಂಪು ಅವರ ಭಾವಲೋಕಗಳ ನಡುವಣ ನಿರ್ಲಿಪ್ತ ಸ್ಪರ್ಧೆಯೊಂದು ಏರ್ಪಟ್ಟ ಹಾಗೆ ಇಲ್ಲಿನ ಚಿತ್ರಗಳನ್ನು ನೋಡುತ್ತಿರುವಂತೆ ಚಲನಶೀಲವಾಗುವ ಪವಾಡ ಸಂಭವಿಸುವಂತೆ ಕಾಣುತ್ತದೆ. ಕುವೆಂಪು ಅವರನ್ನು ಅರಿಯುವ- ತಿಳಿಯುವ ಹಲವು ಮಾದರಿಗಳಿಗೆ ಈಗ ಕ್ಯಾಮರಾ ಎನ್ನುವ ದೃಷ್ಟಿಕೋನವು ಸೇರ್ಪಡೆಗೊಂಡಿದೆ. ಕೃಪಾಕರ -ಸೇನಾನಿಯವರ ಈ ಪ್ರಯತ್ನವು ಕುವೆಂಪು ಅವರ ಬದುಕನ್ನು  ನಮಗೆ ಮತ್ತಷ್ಟು ಬೆಡುಗಾಗಿಯೇ ತೋರಿಸುತ್ತದೆ,’.

‘ಈ ರೀತಿಯೂ ಒಬ್ಬ ಲೇಖಕರನ್ನು ತಿಳಿಯಬಹುದೆಂಬುದು ಆಶ್ಚರ್ಯ ಉಂಟುಮಾಡುತ್ತದೆ. ಈ ಮಂತ್ರದ್ರಷ್ಟಾರನನ್ನು ಅರಿಯಲು ಇದೊಂದು ಅನನ್ಯವಾದ ಪ್ರಯತ್ನ, ಕನ್ನಡದ ಮಟ್ಟಿಗೆ ಏಕೈಕ,’ ಎನ್ನುವುದು ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್. ಶ್ರೀರಾಮ್ ಅವರ ಅಭಿಪ್ರಾಯ.

ಕುವೆಂಪು‌ ವ್ಯಕ್ತಿತ್ವ, ಸಾಹಿತ್ಯದ ತಿಳಿವಿಗಷ್ಟೆ ಅಲ್ಲ, ಕ್ಯಾಮರಾ ಜಗತ್ತು ಎಲ್ಲರ ಅಂಗೈಯಲ್ಲಿ ಆಟಿಕೆಯ ವಸ್ತುವಿನಂತೆ‌ ವಿರಾಜಿಸಿರುವ ಮತ್ತು ಹಲವು ಸಾಧ್ಯತೆಗಳನ್ನು ಒಳಗೊಂಡು ದುಬಾರಿ ಎನ್ನಿಸಿರುವ ಎರಡು ಅತಿಗಳ ಮೇಲಾಟ ನಡೆದಿರುವ ಈ ಹೊತ್ತಿನಲ್ಲಿ ಕಪ್ಪು-ಬಿಳುಪು ಚಿತ್ರ, ಕ್ಯಾಮೆರಾ,ಫಿಲ್ಮ್ಸ್‌, ಸೆರೆ ಹಿಡಿಯುವ , ಪ್ರಿಂಟ್ ಹಾಕುವ, ಬೆಳಕಿಗಾಗಿ ಕಾಯ್ದು ಕೂರುವ ಸವಾಲುಗಳು ಛಾಯಾಗ್ರಹಣ ಕಲಿಯು ಆಸಕ್ತರಿಗೆ ಉತ್ತಮ ಆಕರ ಆಗಬಹುದಾದ ಕೃತಿ ಕೂಡ.

Key words: Camera v/s Kuvempu- Chitrakatha – released -tomorrow (Jan 29).