ಉದ್ಯಮಿ ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ- ರಾಜ್ಯ ಸರ್ಕಾರದ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ.

ಬೆಂಗಳೂರು,ಜನವರಿ,3,2022(www.justkannada.in): ಉದ್ಯಮಿ ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ. ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು. ಅವರನ್ನು ಬಂಧಿಸಿ ಕಂಬಿ ಹಿಂದೆ ಕಳಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ.

ಶಾಸಕ ಅರವಿಂದ್ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಅವರ​ ಮಹದೇವಪುರದ ಅಂಬಲಿಪುರದಲ್ಲಿ‌ರುವ ನಿವಾಸಕ್ಕೆ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಮುಖಂಡರು ಭೇಟಿ ನೀಡಿ ಪ್ರದೀಪ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ  ಮಾತನಾಡಿದ ರಣದೀಪ್ ಸುರ್ಜೆವಾಲ, ಪ್ರದೀಪ್ ಕುಟುಂಬದೊಂದಿಗೆ ದುಃಖ ಹಂಚಿಕೊಳ್ಳಲು ಬಂದಿದ್ದೇವೆ. ಅತಿರೇಕದ ನಿರ್ಧಾರ ಪ್ರದೀಪ್ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು. 40% ಕಮಿಷನ್ ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿದೆ. ಸಂತೋಷ್ ಪಾಟೀಲ್ ಕೂಡ ಬಿಜೆಪಿ ಲೀಡರ್ ಆಗಿದ್ದ ಅವನಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು, ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ, ಇವರ ಮಗಳ ಹೆಂಡತಿಯ ಕಣ್ಣೀರು ಒರೆಸುವುದಕ್ಕೆ ಸರ್ಕಾರದ ಕೈಲಿ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರದಿಂದಲೇ ಇವೆಲ್ಲಾ ಆಗುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಅಸಮಾಧಾನ ವ್ಯಕ್ತಪಡಿಸಿದರು.

Key words: Businessman-Pradeep- death – not suicide- murder-Randeep Singh Surjewala