ರೈತರ ಮೇಲೆ ದೌರ್ಜನ್ಯ ಎಸಗಲು ತುದಿಗಾಲ ಮೇಲೆ ನಿಂತಿರುವ ಬಿಎಸ್ವೈ ಸರಕಾರ: ಟ್ವಿಟ್ಟರ್ ನಲ್ಲಿ ಮಾಜಿ ಸಿಎಂ ಎಚ್ಡಿಕೆ ಟೀಕೆ

ಮೈಸೂರು, ಜೂನ್ 07, 2020 (www.justkannada.in): ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದು ಮೂರ್ಖತನದ ಸೂಚನೆ. ರೈತರ ಮೇಲೆ ದೌರ್ಜನ್ಯ ಎಸಗುವ, ಗುಂಡಿಕ್ಕುವ, ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ, ರೈತರಿಗೆ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಹೇಳಿರುವ ಸರ್ಕಾರ ಅದಕ್ಕೆ ಟ್ರ್ಯಾಕ್ಟರ್‌, ವಾಹನಗಳನ್ನು ಮಾನದಂಡ ಮಾಡಿದೆ. ವೈಜ್ಞಾನಿಕ ಕೃಷಿ, ಟ್ರಾಕ್ಟರ್‌ ಖರೀದಿಗೆ ಪ್ರೋತ್ಸಾಹ ನೀಡುತ್ತಿರುವುದು ಸರ್ಕಾರಗಳೇ ಅಲ್ಲವೇ? ಟ್ರ್ಯಾಕ್ಟರ್‌ ಖರೀದಿಸಲು ಹೇಳಿ, ಅದನ್ನೇ ಮುಂದಿಟ್ಟು ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವುದು ಮೂರ್ಖತನವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗಬೇಕು. ಅದಕ್ಕಾಗಿ ರೈತರ ಅನ್ನದ ತಟ್ಟೆಗೆ ಕೈ ಹಾಕಬಾರದು. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದೋಷಗಳಿವೆ. ಪಟ್ಟಭದ್ರ ಹಿತಾಸಕ್ತಿಗಳಿವೆ. ಅದನ್ನು ಮೊದಲು ಹೋಗಲಾಡಿಸಬೇಕು. ಸರ್ಕಾರ ಅದರತ್ತ ಗಮನ ಹರಿಸಲಿ. ಮಾತಿಗೆ ಮೊದಲು ರೈತರ ಕೊರಳು ಹಿಂಡುವ ತನ್ನ ಎಂದಿನ ಅಭ್ಯಾಸವನ್ನು ಸರ್ಕಾರ ತೊರೆಯಲಿ ಎಂದಿದ್ದಾರೆ.