ಬಿಎಸ್ ವೈ ಇಲ್ಲದ ಬಿಜೆಪಿ ನೆನೆಸಿಕೊಳ್ಳಲು ಸಾಧ್ಯವಿಲ್ಲ: ಬಿವೈ ವಿಜಯೇಂದ್ರಗೆ ಟಿಕೆಟ್  ಕೇಳಿರುವ ಬಗ್ಗೆ ಸಮರ್ಥಿಸಿಕೊಂಡ ಹೆಚ್.ವಿಶ್ವನಾಥ್.

Promotion

ಮೈಸೂರು,ಜುಲೈ,25,2022(www.justkannada.in): ಶಿಕಾರಿಪುರ ಕ್ಷೇತ್ರದಿಂದ ಮಾಜಿ ಸಿ ಎಂ., ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ಕೇಳಿರುವುದನ್ನು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರು ಪ್ರಶ್ನಿಸುವುದಿಲ್ಲ. ಸತತ ಎಂಟು ಬಾರಿ ಪ್ರತಿ‌ನಿಧಿಸಿರುವ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರಗೆ ಯಡಿಯೂರಪ್ಪ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಯಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಯಡಿಯೂರಪ್ಪ ಕೊಡುಗೆ ಅಪಾರವಾಗಿದೆ. ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಕೂಡ ಪಕ್ಷಕ್ಕೆ ಅವರ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಹೀಗಾಗಿ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದರು.

ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ, ಕಾಂಗ್ರೆಸ್ ಪುಂಗಿ ಊದುವವರು ಯಾರು?

ಸಿದ್ಧರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮೋತ್ಸವದ ಅಗತ್ಯವಿರಲಿಲ್ಲ, ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಮೊನ್ನೆ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ, ಕಾಂಗ್ರೆಸ್ ಪುಂಗಿ ಊದುವವರು ಯಾರು? ಎಂದು ಲೇವಡಿ ಮಾಡಿದರು.

ಸಿದ್ದರಾಮೋತ್ಸವದ ಬದಲು ಕಾಂಗ್ರೆಸ್ಸಿನ ಉತ್ಸವ ಆಗಬೇಕು. ಇಂದಿರಾಗಾಂಧಿ, ಡಿ ದೇವರಾಜ ಅರಸುರವರ ಸ್ಮರಣೆ ಮಾಡಬೇಕು. ಸಿದ್ದರಾಮಯ್ಯ ಮಾತೆತ್ತಿದರೇ, ಅನ್ನಭಾಗ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ನಾನು ಶಿಕ್ಷಣ ಸಚಿವನಾಗಿದ್ದೆ. ಆಗಲೇ ಬಿಸಿಯೂಟ ಯೋಜನೆ ಜಾರಿಗೊಳಿಸಿದೆವು‌. 85 ಲಕ್ಷ ಮುಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ನಾವು ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದೆವು.ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಅದಕ್ಕೂ ಬಾಗಿಲು ಹಾಕಿದರು. ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇರಬಾರದು ಎಂದರು.

ಜಾತಿ ರಾಜಕಾರಣ ಅತಿಯಾದರೆ ಒಳ್ಳೆಯದಲ್ಲ. ಪ್ರತಿಯೊಬ್ಬರೂ ತಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಜಾತಿ ರಾಜಕಾರಣ ಮಾಡುವ ಅವಶ್ಯವಿದೆ. ಆದರೆ ಜಾತಿ ರಾಜಕಾರಣ ಅತಿಯಾಗಬಾರದು. ಎಲ್ಲಾ ಜಾತಿಗಳು, ಧರ್ಮೀಯರು ಬೆಂಬಲಿಸಿದರೆ ಮಾತ್ರ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕಾಂಗ್ರೆಸ್ ನಲ್ಲಿ ಒಕ್ಕಲಿಗ ವರ್ಸಸ್ ಅಲ್ಪಸಂಖ್ಯಾತ ರಾಜಕಾರಣ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು.

ಜೆಡಿಎಸ್ ಶಾಸಕರಾದ ಜಿ ಟಿ ದೇವೇಗೌಡ ಮತ್ತು ಸಾ ರಾ ಮಹೇಶ್ ಪರಸ್ಪರ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಜೆಡಿಎಸ್ ನಲ್ಲಿ ಪುತ್ರೋತ್ಸವಕ್ಕೆ ಎಲ್ಲಾ ರೆಡಿಯಾಗಿದೆ. ಇದರಲ್ಲಿ ಹೊಸತೇನಿಲ್ಲ ಎಂದು ವ್ಯಂಗ್ಯವಾಡಿದರು.

ಎಚ್ ವಿಶ್ಚನಾಥ್ ಪುತ್ರ ಅಮಿತ್ ದೇವರಹಟ್ಟಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ಅದು ಆತನ ವೈಯುಕ್ತಿಕ ನಿರ್ಧಾರ. ಅವನಿಗೂ 42 ವರ್ಷ ಆಗಿದೆ, ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆಗಿದ್ದಾನೆ. ಅವನಿಗೂ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿಯಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯ ಅಗತ್ಯವಿಲ್ಲ ಎಂದರು.

Key words: BJP – without –BS yeddyurappa-MLC- H. Vishwanath