ಮುಂಬರುವ ದಿನಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ JUST ೯೦ ನಿಮಿಷಗಳು ಮಾತ್ರ…!

 

ಬೆಂಗಳೂರು, ಆಗಸ್ಟ್ ೧೬, ೨೦೨೧ (www.justkannada.in): ಈಗಾಗಲೇ ವಿಳಂಬವಾಗಿರುವ ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ ವಿಸ್ತರಣೆ ಕಾಮಗಾರಿಗಳು ಬಹುಶಃ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಲೋಕ ಸಭೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಎಂಪಿ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಬೆಂಗಳೂರು-ನಿಡಘಟ್ಟದ ನಡುವಿನ (೫೬.೨ ಕಿ.ಮೀ.ಗಳು) ಹೆದ್ದಾರಿ ರಸ್ತೆ ಕಾಮಗಾರಿ ಈಗಾಗಲೇ ಭಾಗಶಃ ಪೂರ್ಣಗೊಂಡಿದೆ (೪೭ ಕಿ.ಮೀ.). ಈ ಯೋಜನೆಯ ಶೇ.೮೦.೪೯ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಉತ್ತರಿಸಿದರು.

ಈ ಯೋಜನೆಯ ಕಾಮಗಾರಿಗಳ ಮೊದಲನೇ ಪ್ಯಾಕೇಜ್ ಮುಂಚಿತವಾಗಿಯೇ ಆರಂಭವಾಯಿತು. ನಂತರ ನಿಡಘಟ್ಟ-ಮೈಸೂರು (೬೧.೧ ಕಿ.ಮೀ.) ನಡುವಿನ ಎರಡನೇ ಪ್ಯಾಕೇಜ್ ಅನ್ನು ಅನುಮೋದಿಸಲಾಯಿತು. ಈ ಭಾಗದ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈವರೆಗೆ ಕೇವಲ ೨೯.೭೮ ಕಿ.ಮೀ.ಗಳಷ್ಟು ಉದ್ದದ ರಸ್ತೆ ಮಾತ್ರ ಭಾಗಶಃ ಅಥವಾ ಸಂಪೂರ್ಣವಾಗಿ ಪೂರ್ಣಗೊಂಡಿದೆ.
ಒಟ್ಟಾರೆ ಈ ಯೋಜನೆಯು ಶೇ.೭೩.೭ ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ವರ್ಷ ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆಯ ಕಾಮಗಾರಿಗಳನ್ನು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಪುನರಾರಂಭಿಸಲಾಗಿದೆ. ಈ ಹೆದ್ದಾರಿಯಲ್ಲಿ ಅನೇಕ ಫ್ಲೈ ಒವರ್ ಗಳಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಂಗೇರಿ ಹಾಗೂ ಕುಂಬಳಗೊಡು ಬಳಿಯೂ ನಿರ್ಮಾಣವಾಗುತ್ತಿವೆ. ಈ ಮುಂಚೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅನೇಕ ತಿರುವುಗಳಿದ್ದವು. ಆದರೆ ಈ ಹೊಸ ಮಾರ್ಗದಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಸಾಧ್ಯವಾದಷ್ಟೂ ನೇರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಡುವೆ ಬಿಡದಿ, ರಾಮನಗರ-ಚನ್ನಪಟ್ಟಣಗಳ ಬಳಿಯ ಬೈಪಾಸ್ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ.

ಈ ಹೆದ್ದಾರಿ ಅನೇಕ, ನದಿ ಹಾಗೂ ಕೆರೆಗಳನ್ನು ಹಾದು ಹೋಗಿರುವ ಕಾರಣ ಉದ್ದನೆಯ ಸೇತುವೆಗಳ ನಿರ್ಮಾಣ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಈ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರು ಈ ಹೆದ್ದಾರಿ ವಿಸ್ತರಣಾ ಕಾಮಗಾರಿಗಳು ಪೂರ್ಣಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಏಕೆಂದರೆ, ಹೊಸ ಹೆದ್ದಾರಿ ಕಾಮಗಾರಿಗಳು ಪೂರ್ಣಗೊಂಡರೆ ನಡುವೆ ಬರುವ ಪಟ್ಟಣಗಳ ಸ್ಥಳೀಯ ಸಂಚಾರ ದಟ್ಟಣೆ ಹೆದ್ದಾರಿ ವಾಹನಗಳಿಗೆ ಅಡ್ಡಿಯಾಗುವುದಿಲ್ಲ. ಹಾಗಾಗಿ, ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುವ ಮೂಲಕ ಬೆಂಗಳೂರು ಮೈಸೂರು ನಗರಗಳ ನಡುವಿನ ಪ್ರಯಾಣಿಸುವ ಸಮಯವೂ ಕಡಿಮೆಯಾಗಲಿದೆ.

ಈ ಯೋಜನೆಯ ಕಾಮಗಾರಿಗಳು ಇನ್ನೂ ಬೇಗ ಮುಗಿಯಬೇಕಾಗಿತ್ತು. ಆದರೆ ಹಲವಾರು ಸಮಸ್ಯೆಗಳಿಂದಾಗಿ ಇನ್ನೂ ಪೂರ್ಣಗೊಳಿಸಲಾಗಿಲ್ಲ. ಆರಂಭದಲ್ಲಿ ಭೂಮಿ ವಶಪಡಿಸಿಕೊಳ್ಳುವಲ್ಲಿ ಕೆಲವು ಸಮಸ್ಯೆಗಳು ಎದುರಾದವು. ಈ ಯೋಜನೆಯ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಭೂಮಿಪೂಜೆ ಸಮಾರಂಭ ನಡೆದ ನಂತರವೂ ಸಹ ಕಾಮಗಾರಿಗಳು ಆರಂಭವಾಗಲು ಹಲವು ತಿಂಗಳುಗಳೇ ಬೇಕಾಯಿತು. ಜೊತೆಗೆ ಕ್ವಾರಿ ಮತ್ತು ನಂತರದಲ್ಲಿ ಕೋವಿಡ್ ಮಹಾಮಾರಿ ಸಮಸ್ಯೆಗಳು ಎದುರಾದವು. ಕೋವಿಡ್‌ನ ಎರಡನೇ ಅಲೆಯಿಂದಾಗಿ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಈಗ ಪುನಃ ಕಾಮಗಾರಿಗಳು ಆರಂಭವಾಗಿದ್ದು, ಇನ್ನು ಮುಂದೆ ಯಾವುದೇ ತೊಂದರೆಗಳು ಎದುರಾಗದಿದ್ದಲ್ಲಿ ಈಗ ನೀಡಿರುವ ಡೆಡ್‌ಲೈನ್ ಅವಧಿಯೊಳಗೆ ಕಾಮಗಾರಿಗಳು ಪೊರ್ಣಗೊಳ್ಳಲಿವೆ ಎನ್ನುವುದು ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈ ಯೋಜನೆಯಡಿ, ನಾಲ್ಕು ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆರು-ಪಥಗಳಿಗೆ ವಿಸ್ತರಿಸಲಾಗುತ್ತಿದ್ದು, ಎರಡೂ ಕಡೆಗಳಲ್ಲಿ ಎರಡು ಸರ್ವೀಸ್ ಲೇನ್‌ಗಳಿವೆ. ಎನ್‌ಹೆಚ್‌ಎಐ ಪ್ರಕಾರ ಈ ಹೆದ್ದಾರಿ ಬಹುತೇಕ ‘ access controlled’ ರಸ್ತೆಯಾಗಿರುತ್ತದೆ ಹಾಗೂ ವಾಹನಚಾಲಕರಿಗೆ ಎಕ್ಸ್ಪ್ರೆಸ್‌ವೇ ಮೇಲೆ ಸಂಚರಿಸಿದ ಅನುಭವವಾಗಲಿದೆಯಂತೆ!

ಈ ಹೆದ್ದಾರಿ ಹಲವು ಪಟ್ಟಣಗಳನ್ನು ಹಾದು ಹೋಗುವ ಕಾರಣ, ಅನೇಕ ಬೈಪಾಸ್ ರಸ್ತೆಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಭಾಗದ ನಡುವೆ ೫೧.೭೫ ಕಿ.ಮೀ.ಗಳಷ್ಟು ಬೈಪಾಸ್‌ಗಳ ರೂಪದಲ್ಲಿ ಗ್ರೀನ್‌ಫೀಲ್ಡ್ ರಸ್ತೆಗಳಿರುತ್ತವೆ; ಬಿಡದಿ (೬.೯ ಕಿ.ಮೀ.ಗಳು), ರಾಮನಗರ-ಚನ್ನಪಟ್ಟಣ (೨೨.೩೫ ಕಿ.ಮೀ.ಗಳು), ಮದ್ದೂರು (೪.೫ ಕಿ.ಮೀ.ಗಳು), ಮಂಡ್ಯ (೧೦ ಕಿ.ಮೀ.ಗಳು) ಹಾಗೂ ಶ್ರೀರಂಗಪಟ್ಟಣ (೮ ಕಿ.ಮೀ.ಗಳು). ರಾಮನಗರದ ಬಳಿ ನಿರ್ಮಿಸಲಾಗಿರುವ ಬೈಪಾಸ್ ರಸ್ತೆಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕುಂಬಳಗೋಡು ಹಾಗೂ ಶ್ರೀರಂಗಪಟ್ಟಣ ಬಳಿ ಟೋಲ್ ಬೂತ್‌ಗಳಿರುತ್ತವೆ. ಅಧಿಕಾರಿಗಳು ಈ ಹೆದ್ದಾರಿ ನಡುವೆ ೪೯ ಅಂಡರ್‌ಪಾಸ್ ಹಾಗೂ ೧೩ ಫ್ಲೈಒವರ್ ಗಳು ನಿರ್ಮಾಣವಾಗುತ್ತಿರುವ ೬೨ ಜಂಕ್ಷನ್‌ಗಳನ್ನು ಗುರುತಿಸಿದ್ದಾರೆ. ಈ ಮೂಲಕ ಇಂತಹ ಗ್ರೇಡ್ ಜಂಕ್ಷನ್‌ಗಳಲ್ಲಿ ಕ್ರಾಸಿಂಗ್‌ಗಳನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಮೇಲಾಗಿ, ವಿವಿಧ ನದಿ ಹಾಗೂ ಕೆರೆಗಳ ಮೇಲೆ ಒಂಬತ್ತು ಪ್ರಮುಖ ಸೇತುವೆಗಳು, ೪೪ ಸಣ್ಣ ಸೇತುವೆಗಳು, ನಾಲ್ಕು ರೈಲ್ವೆ ಓವರ್‌ಬ್ರಿಡ್ಜ್ಗಳು ಹಾಗೂ ೬೯ ಬಸ್ ನಿಲ್ದಾಣಗಳ ನಿರ್ಮಾಣವೂ ಸಹ ಈ ಯೋಜನೆಯಡಿ ಸೇರಿದೆ.

ಈ ಯೋಜನೆಯ ಒಟ್ಟು ಅಂದಾಜು ಮೊತ್ತ ರೂ.೭,೪೦೦ ಕೋಟಿ (ಮೊದಲನೇ ಹಂತ: ರೂ.೩,೯೦೦ ಕೋಟಿ, ಎರಡನೇ ಹಂತ: ರೂ.೩,೫೦೦ ಕೋಟಿ). ಒಮ್ಮೆ ಈ ಹೆದ್ದಾರಿ ಪೂರ್ಣಗೊಂಡರೆ, ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವಿನ ಪ್ರಯಾಣ ಅವಧಿ ಕೇವಲ ೯೦ ನಿಮಿಷಗಳಿಗೆ ಇಳಿಕೆಯಾಗುತ್ತದೆ. ಪ್ರಸ್ತುತ ಈ ಎರಡೂ ನಗರಗಳ ನಡುವಿನ ಪ್ರಯಾಣ ಒಂದು ಕಡೆಗೆ ೩.೫ ಗಂಟೆಗಳಾಗಿದೆ. ಹಾಗಾಗಿ ಈ ಯೋಜನೆ ಬಹಳ ಉಪಯುಕ್ತವಾಗಲಿದೆ.

jk

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : bengaluru-mysuru-in-90-minutes-need-for-speed