ಸಾಲ ಕೊಡಿಸುವುದಾಗಿ ಹೇಳಿ ಇಬ್ಬರು ಉದ್ಯಮಿಗಳಿಗೆ ವಂಚಿಸಿದ್ಧ ನಾಲ್ವರ ಬಂಧನ.

kannada t-shirts

ಬೆಂಗಳೂರು, ಡಿಸೆಂಬರ್ 27, 2021 (www.justkannada.in): ಸುಮಾರು ಐದು ಜನರ ತಂಡವೊಂದು ಬೆಂಗಳೂರಿನ ಇಬ್ಬರು ಉದ್ಯಮಿಗಳಿಗೆ ರೂ.390 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಅವರಿಂದ ಒಟ್ಟು ರೂ.5.8 ಕೋಟಿ ಹಣವನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಮೊತ್ತೊಬ್ಬ ಪರಾರಿಯಾಗಿದ್ದಾನೆ.

ಬಂಧಿಸಿರುವ ವ್ಯಕ್ತಿಗಳನ್ನು ಕೇರಳ ಮೂಲದ ಸೈಯ್ಯದ ಇಬ್ರಾಹಿಂ ಅಲಿಯಾಸ್ ಡೇನಿಯಲ್ ಆರ್ಮ್ಸ್ಟಾಂಗ್ ಅಲಿಯಾಸ್ ಅಮರನ್; ತಮಿಳುನಾಡು ಮೂಲದ ವಿವೇಕಾನಂದ ಅಲಿಯಾಸ್ ವಿಕ್ಕಿ ,  ವಿವೇಕಾ ಅಲಿಯಾಸ್ ವಿವೇಕಾನಂದ ಕುಮಾರ್, ಕ್ರಿಸ್ಟೊಫರ್ ಅಲಿಯಾಸ್ ರಾಘವನ್ ಮತ್ತು ಶಿವರಾಮನ್ ಅಲಿಯಾಸ್ ನಾಗರಾಜ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಅಶೋಕನಗರದ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪಿ ಮತ್ತು ಅರುಣಾಚಲ ಪ್ರದೇಶ ಮೂಲದ ತಾರಂ ಅವರೇ ವಂಚನೆಗೊಳಗಾದವರು.

ಗಿರೀಶ್ ಅವರು ಹೊಸ ರಿಯಲ್ ಎಸ್ಟೇಟ್ ಯೋಜನೆಯೊಂದನ್ನು ಆರಂಭಿಸಲು ದೊಡ್ಡ ಪ್ರಮಾಣದ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರು. ವಂಚಕರ ತಂಡದ ಪೈಕಿ ಒಬ್ಬನಿಗೆ ಗಿರೀಶ್ ಕುರಿತು ಮಾಹಿತಿ ಲಭಿಸಿತು. ಆತ ಗಿರೀಶ್ ಅವರನ್ನು ಬಿಟಿಎಂ ಬಡಾವಣೆಯಲ್ಲಿ ಹಣಕಾಸು ಸಂಸ್ಥೆಯನ್ನು ನಡೆಸುತ್ತಿದ್ದಂತಹ ಆರ್ಮ್ಸ್ಟಾಂಗ್ ಬಳಿಗೆ ಕಳುಹಿಸಿದ. ನಂತರ ವಿವೇಕಾನಂದ ಮತ್ತು ರಾಘವನ್ ಅವರು ಗಿರೀಶ್ ಅವರನ್ನು ಭೇಟಿಯಾಗಿ ರೂ.೧೫೦ ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯವಹಾರವನ್ನು ಕುದುರಿಸಿದರು. ನವೆಂಬರ್ 8ರಂದು ಗಿರೀಶ್‌ ಗೆ ಇ-ಮೇಲ್ ಮೂಲಕ ಸಾಲ ಮಂಜೂರಾಗಿರುವ ಕುರಿತ ಒಂದು ಇ-ಮೇಲ್ ಬಂತು. ಆ ಪ್ರಕಾರವಾಗಿ ಅವರಿಗೆ ನವೆಂಬರ್ ೧೬ರಂದು ಸಾಲದ ಮೊತ್ತ ದೊರೆಯಬೇಕಿತ್ತು. ಇದಕ್ಕಾಗಿ ತಂಡಕ್ಕೆ ರೂ.೨.೨೫ ಕೋಟಿ ಕಮೀಷನ್ ರೂಪದಲ್ಲಿ ನೀಡಬೇಕಿದ್ದು, ಒಟ್ಟಿಗೆ ನೀಡಬೇಕೆಂಬ ಶರತ್ತನ್ನು ವಿಧಿಸಿದ್ದರು. ಅದನ್ನು ನಂಬಿ ಗಿರೀಶ್ ಅವರು ಹಣವನ್ನು ಪಾವತಿಸಿದರು. ಆದರೆ ಹಣ ಕೈಗೆ ಸೇರಿದ ಕೂಡಲೇ ಇಡೀ ತಂಡದ ಸದಸ್ಯರ ಪರಾರಿಯಾಗಿದ್ದರು. ಈ ಸಂಬಂಧ ಗಿರೀಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಾರಂ ಎಂಬ ಮತ್ತೋರ್ವ ವ್ಯಾಪಾರಸ್ಥ ಇದೇ ರೀತಿ ರೂ.೩.೬ ಕೋಟಿ ಮೋಸ ಹೋಗಿದ್ದಾರೆ. ಇವರಿಗೆ ರೂ.೨೪೦ ಕೋಟಿ ಸಾಲ ಕೊಡಿಸುವುದಾಗಿ ವಂಚಕರು ನಂಬಿಸದ್ದರಂತೆ.

ಈ ವಂಚಕರ ತಂಡ ತಾರಂ ಅವರಿಗೆ ಅಕ್ಟೋಬರ್ ೨೫ರಂದು ಅರುಣಾಚಲ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಿದ್ದರು ಮತ್ತು ಅವರನ್ನು ಬಿಟಿಎಂ ಬಡಾವಣೆಯಲ್ಲಿದ್ದಂತಹ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದರು. ನವೆಂಬರ್ ೮ರಂದು ತಾರಂ ಅವರಿಗೆ ಸಾಲದ ಮಂಜೂರಾತಿ ಇ-ಮೇಲ್ ಕಳುಹಿಸಿದ್ದರು ಹಾಗೂ ಆರ್ಮ್ಸ್ಟಾಂಗ್ ಆತನನ್ನು ನವೆಂಬರ್ ೧೪ರಂದು ಕಚೇರಿಯಲ್ಲಿ ಭೇಟಿಯಾಗಿದ್ದ. ತಾರಂ ವಂಚಕರ ಮಾತುಗಳಿಗೆ ಮರುಳಾಗಿ ಬರೋಬ್ಬರಿ ರೂ.೩.೬ ಕೋಟಿ ಕಮೀಷನ್ ನೀಡಲು ಒಪ್ಪಿ, ಮರು ದಿನವೇ ಆ ಮೊತ್ತವನ್ನು ವಂಚಕರಿಗೆ ವರ್ಗಾಯಿಸಿದ್ದರು. ಒಪ್ಪಂದದ ಪ್ರಕಾರ ಅವರಿಗೆ ಅದೇ ದಿನ ಸಂಜೆ ಸಾಲದ ಮೊತ್ತ ದೊರೆಯಬೇಕಿತ್ತು ಆದರೆ ಬರಲಿಲ್ಲ. ತಾರಂ ಆರ್ಮ್ಸ್ಟಾಂಗ್ ಕಚೇರಿಗೆ ತೆರಳಿದಾಗ ಮೋಸ ಹೋಗಿರುವ ವಿಚಾರ ತಿಳಿದು ಬಂತು.

ಪೊಲೀಸರ ಪ್ರಕಾರ ಈ ವಂಚಕರ ತಂಡ ತಮ್ಮ ವಂಚನೆಯ ವ್ಯವಹಾರವನ್ನು ನಡೆಸಲು ಮುಂಚಿತವಾಗಿಯೇ ಯೋಜನೆ ರೂಪಿಸಿದ್ದರು. ಆರ್ಮ್ಸ್ಟಾಂಗ್ ಎಂಬ ವ್ಯಕ್ತಿ ನವೆಂಬರ್ ಮೊದಲ ವಾರದಲ್ಲಿ ‘ಏಸ್ ವೆಂಚ್ಯರ್ಸ್ ಕ್ಯಾಪಿಟಲ್, ಎಂಒಯು ಗ್ರೂಪ್ ಆಫ್ ಕಂಪನೀಸ್’ ಎಂಬ ಹೆಸರಿನಲ್ಲಿ ಒಂದು ಹಣಕಾಸಿನ ಸಂಸ್ಥೆಯನ್ನು ನೋಂದಾಯಿಸಿದ್ದ. ಕಚೇರಿಯನ್ನು ವಿಜೃಂಭಣೆಯಿಂದ ಅಲಂಕಾರಗೊಳಿಸಲು ಅಗತ್ಯವಿರುವ ಪೀಠೋಪಕರಣಗಳು ಹಾಗೂ ತಾತ್ಕಾಲಿಕ ಕಚೇರಿಯನ್ನೂ ಸಿದ್ಧಪಡಿಸಿದ್ದರು. ಕಂಪನಿಯ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆಯನ್ನೂ ತೆರೆದಿದ್ದರು. ಇದಾದ ನಂತರ ದೊಡ್ಡ ಪ್ರಮಾಣದ ಸಾಲದ ಅಗತ್ಯವಿರುವಂತಹ ಉದ್ಯಮಿಗಳಿಗಾಗಿ ಹುಡುಕಾಟವನ್ನು ಆರಂಭಿಸಿದರು. ಆ ಹುಡುಕಾಟದ ಮೂಲಕ ಗಿರೀಶ್ ಮತ್ತು ತಾರಂ ಅವರನ್ನು ಸಂಪರ್ಕಿಸಿದ್ದರು.

ವಂಚಿಸಿದ ಹಣವನ್ನು ಈ ತಂಡದ ಸದಸ್ಯರು ಬೆಂಗಳೂರಿನಲ್ಲೇ ಎರಡು ವಿವಿಧ ಚಿನ್ನಾಭರಣ ಮಳಿಗೆಗಳಿಂದ ಚಿನ್ನವನ್ನು ಖರೀದಿಸಲು ಬಳಸಿಕೊಂಡಿದ್ದರು. ಇದಕ್ಕಾಗಿ ಬರೋಬ್ಬರಿ ರೂ.೩೩ ಲಕ್ಷ ಜಿಎಸ್‌ ಟಿಯನ್ನೂ ಪಾವತಿಸಿದ್ದರಂತೆ. ನಂತರ ಆ ಚಿನ್ನಾಭರಣಗಳನ್ನು ಸೇಲಂನಲ್ಲಿರುವ ಒಂದು ಹೋಟೆಲ್‌ ಗೆ ಕೊಂಡೊಯ್ದು ಅಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ಪೊಲೀಸರು ವಂಚಕರಿಂದ ಒಟ್ಟು ೮೨೧೫ ಗ್ರಾಂ ಚಿನ್ನ, ಒಂದು ಬಿಎಂಡಬ್ಲ್ಯು ಕಾರ್, ಒಂದು ಮಾರುತಿ ಅರ್ಟಿಗಾ ಮತ್ತು ರೂ.೩೬.೬ ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಇದ್ದಂತಹ ರೂ.೧.೮೬ ಲಕ್ಷ ಹಣವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಈ ತಂಡವು ಸುಮಾರು ರೂ.೪೫ ಲಕ್ಷವನ್ನು ಬೇರೆ ಉದ್ದೇಶಗಳಿಗಾಗಿ ಬಳಸಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bengaluru –businessmen- lose -Rs 5.8 crore – Rs 390-crore-loan-arrest-four

website developers in mysore