ಬೆಂಗಳೂರು: ಮೊದಲ ದಿನ 1.7 ಸಾವಿರ ಮೆಟ್ರೊ ಕ್ಯೂಆರ್ ಟಿಕೆಟ್‌ ಗಳ ಮಾರಾಟ.

ಬೆಂಗಳೂರು, ನವೆಂಬರ್ ,2,2022 (www.justkannada.in): ಬೆಂಗಳೂರಿನಲ್ಲಿ ಸುಮಾರು 2 ಸಾವಿರ ಮೆಟ್ರೊ ಪ್ರಯಾಣಿಕರು ನವೆಂಬರ್ 1 ರಂದು ನಮ್ಮ ಮೆಟ್ರೊ ಪರಿಚಯಿಸಿರುವ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಆ್ಯಪ್ ಆಧಾರಿತ ಟಿಕೆಟ್ ವ್ಯವಸ್ಥೆ ಮೂಲಕ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಿದ್ದಾರೆ.

ನವೆಂಬರ್ 1 ರಿಂದ, ಅಂದರೆ ಕರ್ನಾಟಕ ರಾಜ್ಯೋತ್ಸವ ದಿನದಿಂದ, ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ನಿಲ್ದಾಣಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಏಕೆಂದರೆ ನಮ್ಮ ಮೆಟ್ರೊ ಟಿಕೆಟ್‌ ಗಳನ್ನು ಆನ್‌ ಲೈನ್ ಮೂಲಕ ಖರೀದಿಸಲು ವಿಶೇಷ ಆ್ಯಪ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಮೂಲಕ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ಗಳನ್ನು ಖರೀದಿಸುವುದು ಹಾಗೂ ಸ್ಮಾರ್ಟ್  ಕಾರ್ಡ್ ಗಳನ್ನು ರೀಚಾರ್ಜ್ ಮಾಡುವುದು, ಅಥವಾ ಚಿಲ್ಲರೆಗಾಗಿ ತಡಕಾಡುವಂತಹ ಕಷ್ಟಗಳು ನಿವಾರಣೆಯಾಗಿದೆ.

ಈಗ ನಮ್ಮ ಮೆಟ್ರೊ ಪ್ರಯಾಣಿಕರು ನಮ್ಮ ಮೆಟ್ರೊ ಆ್ಯಪ್‌ಗೆ ಲಾಗ್ ಆನ್ ಆಗಿ, ಅಥವಾ ವಾಟ್ಸಪ್ ನ ಚಾಟ್‌ಬಾಟ್ ಸಂಖ್ಯೆ (೮೧೦ ೫೫೫ ೬೬ ೭೭) ಮೂಲಕ ಟಿಕೆಟ್‌ ಗಳನ್ನು ಖರೀದಿಸಬಹುದು. ಈ ಆ್ಯಪ್‌ ಗಳ ಮೂಲಕವೇ ಹಣ ಪಾವತಿಸಿ, ಜೊತೆಗೆ ಟಿಕೆಟ್ ದರದ ಮೇಲೆ ಶೇ.೫ರಷ್ಟು ರಿಯಾಯಿತಿಯನ್ನೂ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ನ ಪ್ರಕಾರ, ಮಂಗಳವಾರದಂದು ರಾತ್ರಿ ೮.೪೫ರವರೆಗೆ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಮೂಲಕ ಸುಮಾರು ೧,೬೬೯ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ ಗಳನ್ನು ಖರೀದಿಸಿದ್ದರು ಎಂದು ಮಾಹಿತಿ ನೀಡಿದೆ.

ಬೆಳಗಿನ ಸಮಯದಲ್ಲಿ ಸುಮಾರು ೧೪,೪೦೦ ಜನರು ವಾಟ್ಸ್ ಆ್ಯಪ್ ಚಾಟ್‌ ಬಾಟ್ ಅನ್ನು ಬಳಸಿರುವುದಾಗಿ ಬಿಎಂಆರ್‌ ಸಿಎಲ್ ಮಾಹಿತಿ ನೀಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bengaluru- 1.7 thousand-Metro- QR tickets – sold – first day