ವಶೀಕರಣ ಮಾಡಿ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾನ ಬಂಧನ

Promotion

ಬೆಂಗಳೂರು:ಮೇ-14:(www.justkannada.in) ಮಹಿಳೆಯರನ್ನು ಯಾಮಾರಿಸಿ ವಂಚಿಸುತ್ತಿದ್ದ ದೆಹಲಿ ಮೂಲದ ನಕಲಿ ಬಾಬಾನನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಹಣ, ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಉಪೇಂದರ್‌ ಸಿಂಗ್‌(40) ಬಂಧಿತ ಆರೋಪಿ. ಈತ ಸಿಖ್‌ ಗುರು ಗುರುನಾನಕ್‌ ಅವರ ಫೋಟೋ ತೋರಿಸಿ ಮುಗ್ಧ ಮಹಿಳೆಯರನ್ನು ವಶೀಕರಣ ಮಾಡಿಕೊಂಡು ಅವರಿಂದ ಹಣ, ಒಡವೆಗಳನ್ನು ದೋಚುತ್ತಿದ್ದ.

ಕಳೆದವರ್ಷ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ಎಇಸಿಎಸ್‌ ಲೇಔಟ್‌ನಲ್ಲಿ ಮಹಿಳೆಯೊಬ್ಬರನ್ನು ಯಾಮಾರಿಸಿ 30 ಸಾವಿರ ರೂ. ದೋಚಿದ್ದ ಉಪೇಂದರ್ ಸಿಂಗ್, ನಿನ್ನೆ ಕೂಡ ಅದೇ ಪ್ರದೇಶದ ಮತ್ತೊಂದು ಮನೆಯಲ್ಲಿ ಮಹಿಳೆಯೊಬ್ಬರನ್ನು ಯಾಮಾರಿಸಿ ಹಣ, ಆಭರಣ ದೋಚಲು ಯತ್ನಿಸುತ್ತಿದ್ದ. ಈ ವೇಳೆ ಗಸ್ತು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ವರ್ಷ ಸುಕನ್ಯಾ ಎಂಬುವರ ಮನೆಗೆ ಹೋಗಿ ಅವರನ್ನು ಎಟಿಎಂಗೆ ಕರೆದೊಯ್ದು 30 ಸಾವಿರ ರೂ.ಗಳನ್ನು ಅವರ ಕೈಯಿಂದಲೇ ಡ್ರಾ ಮಾಡಿಸಿಕೊಂಡಿದ್ದ ಈ ನಕಲಿ ಬಾಬಾ. ಈ ಕುರಿತು ಮಹಿಳೆ ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಎಇಸಿಎಸ್‌ ಲೇಔಟ್‌ನ ವಿವಿಧ ರಸ್ತೆಗಳಲ್ಲಿ ಓಡಾಡುತ್ತ ಈತ ಸಿಖ್‌ ಸಮುದಾಯದವರನ್ನೇ ಹುಡುಕುತ್ತಿದ್ದ. ಮನೆ ಪ್ರವೇಶಿಸಿ ಕುಟುಂಬದಲ್ಲಿ ಸಮಸ್ಯೆ, ಕಷ್ಟಗಳು, ಶಿಕ್ಷಣ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವ ನೆಪದಲ್ಲಿ ಬಾಬಾ ಸೋಗಿನಲ್ಲಿ ಮಹಿಳೆಯರನ್ನು ಮಾತನಾಡಿಸುತ್ತಿದ್ದ. ನಂತರ ಗುರುನಾನಕ್‌ರ ಫೋಟೋ ತೋರಿಸಿ ಮಂತ್ರ ಹೇಳಿ ಅವರನ್ನು ವಶೀಕರಣ ಮಾಡಿಕೊಳ್ಳುತ್ತಿದ್ದ. ಮಾತಿಗೆ ಮರಳುಗುವವರನ್ನು ನೇರವಾಗಿ ಎಟಿಎಂಗೆ ಕರೆದೊಯ್ದು ಅವರಿಂದಲೇ ಹಣ ಡ್ರಾ ಮಾಡಿಸಿಕೊಂಡು ಪಡೆದು ಪರಾರಿಯಾಗುತ್ತಿದ್ದ.

ಸುಕನ್ಯಾ ನೀಡಿದ ದೂರಿನ ಮೇರೆಗೆ ಪೊಲೀಸರು ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಎಟಿಎಂ ಒಳಗೆ ಸುಕನ್ಯಾ ಅವರೇ ಹೋಗಿ ಹಣ ಡ್ರಾ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ, ಅವರ ಜೊತೆ ಒಬ್ಬ ಸರ್ದಾರ್‌ ಜೀ ಇರುವುದು ಕಾಣಿಸಿತು. ಈ ಹಿನ್ನೆಲೆಯಲ್ಲಿ ಆತನ ಫೋಟೋ ಹಿಡಿದುಕೊಂಡಿದ್ದ ಪೊಲೀಸರು, ಆತನ ಮೇಲೆ ನಿಗಾ ಇಟ್ಟಿದ್ದರು. ಕೊನೆಗೂ ಈಗ ನಕಲಿ ಬಾಬಾನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಶೀಕರಣ ಮಾಡಿ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾನ ಬಂಧನ
Bangalore,fake baba,arrested,HAL Police