ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ಹೈವೇ: ಟ್ವಿಟ್ಟರ್’ನಲ್ಲಿ ಬಿಜೆಪಿ ವಿರುದ್ಧ ಎಚ್ಡಿಕೆ ಆರೋಪಗಳ ಸುರಿಮಳೆ

Promotion

ಮೈಸೂರು ಮಾರ್ಚ್ 12, 2023 (www.justkannada.in): ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ?ಇದು ಹಣ ಮಾಡಲು ರಹದಾರಿ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ.

ಈ ಕುರಿತು ಅವರು ಸರಣಿ ಟ್ವೀಟ್ ಮಾಡಿದ್ದು, ಆರೋಪಗಳ ಸುರಿಮಳೆಗೈದಿದ್ದಾರೆ.

ಹೀಗಿವೆ ಕುಮಾರಸ್ವಾಮಿ ಟ್ವಿಟ್ಟರ್ ಬಾಣಗಳು…

ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ

ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ? ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ.

ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ. ಹಾಗಾದರೆ; ಕೆಳಗಿನ ಅಂಶಗಳನ್ನು ಗಮನಿಸೋಣ.

ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎನ್ನುವುದು ನನ್ನ ಅನುಮಾನ.

ಮಧ್ಯಮ,ಸಣ್ಣಗಾತ್ರದ ಹೊಟೇಲು, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ.6000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ‌ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ.

ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್ ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಸತ್ಯ.

ಹಳೆಯ ಹೆದ್ದಾರಿ ಜತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು.

ಬದುಕು ಕಸಿದುಕೊಂಡ ದಶಪಥದ ಲೋಕಾರ್ಪಣೆಗೆ ಬರುತ್ತಿರುವ ಪ್ರಧಾನಮಂತ್ರಿ ಶ್ರೀ @narendramodi

ಅವರ ವಿರುದ್ಧ ಮಂಡ್ಯ ಸೇರಿ ಹೆದ್ದಾರಿ ಉದ್ದಕ್ಕೂ ಜನರ ಆಕ್ರೋಶ ಆಸ್ಫೋಟಗೊಂಡಿದೆ, ಕಪ್ಪುಪಟ್ಟಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಅದು ಬೇಡ ಎಂದು ವಿನಂತಿಸುತ್ತೇನೆ. ನ್ಯಾಯ ಕೇಳೋಣ,ಹಕ್ಕು ಪ್ರತಿಪಾದಿಸೋಣ. ಅವರಿಗೆ ಅಗೌರವ ತೋರಿಸುವುದು ಬೇಡ.

ಜನರಿಗೂ ಸಿಟ್ಟಿದೆ, ಅದು ಸಹಜ. ದ್ವಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಿದ್ದು ಏಕೆ? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ. ಷಟ್ಪಥದ (ಆರು ಪಥ) ಮುಖ್ಯ ಕಾರಿಡಾರಿನಲ್ಲಿ ಕೊನೆಯಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇಕೆ? ಇದೇನು ಬಿಟ್ಟಿ ಉಪಕಾರವೇ? ಅಲ್ಲ, ಆ ಜನರ ಹಕ್ಕು.

  1. 30 ವರ್ಷಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನರು ಟೋಲ್ ಕಟ್ಟುತ್ತಾರೆ. ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಗುತ್ತಿಗೆದಾರರ ಜೇಬಿಗೆ ಬಹುದೊಡ್ಡ ಗಂಟು ಸೇರಲಿದೆ ಹಾಗೂ ಕೇಂದ್ರದ ಬಿಜೆಪಿ ಸರಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ. ದಶಪಥದ ಒಳಲೆಕ್ಕಗಳ ಸತ್ಯ ಜನರಿಗೆ ಗೊತ್ತಾಗಬೇಕಿದೆ.

ಕನ್ನಡಿಗರಿಗೆ ಕಣ್ಣಿಗೆ ಮಂಕುಬೂದಿ ಎರಚಿ, ಈ ಸತ್ಯವನ್ನು ‌ಮರೆಮಾಚಿ, ತಾವೇ ಈ ರಸ್ತೆ ನಿರ್ಮಾಣಕ್ಕೆ ಕಾರಣ ಎಂದು ಬಿಜೆಪಿಗರು ರಣರಣ ಬೊಬ್ಬೆ ಹೊಡೆಯುತ್ತಿರುವುದು ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹ.

ಈ ಎಕ್ಸ್ ಪ್ರೆಸ್ ಹೆದ್ದಾರಿಯ ನಿಜವಾದ ಹಕ್ಕುದಾರರಾದ ರಾಮನಗರ, ಮಂಡ್ಯ ಜನರನ್ನು ಪರಾವಲಂಭಿಗಳನ್ನಾಗಿ ಮಾಡಿದ್ದಲ್ಲದೆ, ಭೂಮಿ ಕಳೆದುಕೊಂಡ ಬಡರೈತರು ಹೆದ್ದಾರಿ ಬದಿ ನಿಂತು ಭಿಕ್ಷೆ ಬೇಡುವಂಥ ದುಃಸ್ಥಿತಿಯನ್ನು ಕೇಂದ್ರ ಸರಕಾರ ಸೃಷ್ಟಿಸಿದೆ.

ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಮಾನ್ಯ ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ.

ಹೊಸ ದಶಪಥ ಹೆದ್ದಾರಿ ಜನರ ಬದುಕು ಕಟ್ಟುವ ರಹದಾರಿಯಷ್ಟೇ ಆಗಲಿ. ಅದು ಬಿಟ್ಟು ಕೆಲವರ ಪಾಲಿನ ಎಟಿಎಂ ಆಗಿ, ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ ಆಗದಿರಲಿ.

ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ! ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ!! ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು.