“ಹೀಗೆ ಮಾಡಿದರೆ ಶೇ.೭೦ ರಿಂದ ಶೇ.೭೫ರಷ್ಟು ಮೊಬೈಲ್ ಫೋನ್ ಕಳ್ಳತನ ತಪ್ಪಿಸಬಹುದು..

ಬೆಂಗಳೂರು, ಅಕ್ಟೋಬರ್ ೧೯, ೨೦೨೧ (www.justkannada.in): ಇತ್ತೀಚೆಗೆ ಬೆಂಗಳೂರಿನ ಬಸವನಗುಡಿ ಪೊಲೀಸರು ತಮ್ಮ ದುಬಾರಿ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದ ೨೩ ಮಂದಿಗೆ ಅವರ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಹಿಂದಿರುಗಿಸುವಲ್ಲಿ ಸಫಲರಾಗಿದ್ದಾರೆ.

ತಪಾಸಣೆ ನಡೆಸಿ ಕಳ್ಳರಿಂದ ಮೊಬೈಲ್ ಫೋನ್‌ಗಳನ್ನು ಮರಳಿ ಪಡೆದ ಬಸವನಗುಡಿ ವಿಭಾಗದ ಪೊಲೀಸರು ಭಾನುವಾರದಂದು ಮೊಬೈಲ್‌ಗಳ ರಿಕವರಿ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಅವರವರ ಮೊಬೈಲ್ ದೂರವಾಣಿಗಳನ್ನು ಹೊಂದಿರುಗಿಸುವುದರ ಜೊತೆಗೆ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿಕೊಟ್ಟರು.

ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೨೩ ಜನರು ಇ-ಲಾಸ್ಟ್ ಪೋರ್ಟಲ್‌ನಲ್ಲಿ ಮೊಬೈಲ್ ದೂರವಾಣಿಗಳನ್ನು ಕಳೆದುಕೊಂಡ ಕುರಿತು ದೂರುಗಳನ್ನು ದಾಖಲಿಸಿದ್ದರು. ಮೊಬೈಲ್ ಮಾಲೀಕರಿಗೆ ಅವರವರ ಫೋನ್‌ಗಳನ್ನು ಹಿಂದಿರುಗಿಸುವಾಗ, “ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಬಳಸುವ ಬದಲು ಬ್ಲೂಟೂತ್‌ಗಳನ್ನು ಬಳಸಬೇಕು ಹಾಗೂ ಮೊಬೈಲ್ ದೂರವಾಣಿ ಕರೆಗಳಿಗೆ ಉತ್ತರಿಸುವಾಗ ತಮ್ಮ ಜೇಬುಗಳು ಅಥವಾ ಬ್ಯಾಗುಗಳಿಂದ ಮೊಬೈಲ್‌ಗಳನ್ನು ತೆಗೆಯುವುದನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿರುವಾಗ ನಿಮ್ಮ ಫೋನಗಳನ್ನು ನಿಮ್ಮ ಪ್ಯಾಂಟುಗಳೂ ಅಥವಾ ನಿಮ್ಮ ಷರ್ಟುಗಳ ಜೇಬುಗಳಲ್ಲಿ ಭದ್ರವಾಗಿಟ್ಟುಕೊಂಡು, ಎಚ್ಚರಿಕೆಯನ್ನೂ ವಹಿಸಬೇಕೆಂದು,” ತಿಳಿಸಿದರು.

ಬಸವನಗುಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರು ಹೇಳಿದ ಪ್ರಕಾರ ಈ ವರ್ಷದ ಜನವರಿ ತಿಂಗಳಿಂದ ಈವರೆಗೆ ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸುಮಾರು ೨೩೧ ದೂರುಗಳು ಬಂದಿರುವುದಾಗಿ ತಿಳಿಸಿದ್ದಾರೆ. “ಮೊಬೈಲ್ ಸಾಧನದ IMEI ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ೨೩ ಸಾಧನಗಳನ್ನು ಕಳ್ಳರಿಂದ ಹಿಂದಕ್ಕೆ ಪಡೆದಿದ್ದೇವೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಜನರು ಸಾರ್ವಜನಿಕ ಸ್ಥಳಗಳಲ್ಲಿ ಕರೆ ಬಂದಾಗ ಸಾಮಾನ್ಯವಾಗಿ ತಮ್ಮ ಮೊಬೈಲ್ ಸಾಧನ ಕಳ್ಳತನವಾಗಬಹುದು ಎಂಬ ಅರಿವಿಲ್ಲದೆ ಕೈಯಲ್ಲಿ ಮೊಬೈಲ್ ಸಾಧನವನ್ನು ಸಡಿಲವಾಗಿ ಹಿಡಿದುಕೊಂಡು ಮಾತನಾಡುವುದು ಅಥವಾ ಟೆಕ್ಸ್ಟ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಇದರ ಅನುಕೂಲವನ್ನು ಪಡೆಯುವ ಕಳ್ಳರು ಸುಲಭವಾಗಿ ಅದನ್ನು ಕಸಿದುಕೊಂಡು ಪರಾರಿಯಾಗುತ್ತಾರೆ,” ಎಂದು ವಿವರಿಸಿದರು.

Two-Years-Jammu and Kashmir-4G Mobile-Internet-Service 
ಕೃಪೆ : internet

ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಜನದಟ್ಟಣೆ ಕಡಿಮೆ ಇರುವಂತಹ ಸ್ಥಳಗಳಲ್ಲಿರುವಾಗ ಸಾಧ್ಯವಾದಷ್ಟೂ ಮೊಬೈಲ್ ಸಾಧನಗಳ ಬಳಕೆಯನ್ನು ತಪ್ಪಿಸಬೇಕೆಂದು ತಿಳಿಸಿದ್ದಾರೆ. ಜೊತೆಗೆ ಇಂತಹ ಸ್ಥಳಗಳಲ್ಲಿರುವಾಗ ಮೊಬೈಲ್ ಕರೆಗಳನ್ನು ಸ್ವೀಕರಿಸುವ ಮುಂಚೆ ಸುತ್ತಮುತ್ತಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆಯೂ ಸೂಚಿಸಿದ್ದಾರೆ.

ಜನನಿಬಿಡ ಪ್ರದೇಶಗಳಲ್ಲಿರುವಾಗ ಜನರು ತಮ್ಮ ಮೊಬೈಲ್ ಸಾಧನಗಳನ್ನು ಲಾಕ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಒಳಿತು. ಸಾಧ್ಯವಾದಷ್ಟೂ ಪಿಕ್‌ಪಾಕೆಟ್ ಮಾಡುವವರಿಂದ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.

“ಹೀಗೆ ಮಾಡಿದರೆ ಶೇ.೭೦ ರಿಂದ ಶೇ.೭೫ರಷ್ಟು ಮೊಬೈಲ್ ದೂರವಾಣಿ ಕಳ್ಳತನದ ಅಥವಾ ಕಸಿದು ಪರಾರಿಯಾಗುವಂತಹ ಪ್ರಕರಣಗಳನ್ನು ತಪ್ಪಿಸಬಹುದು. ಉಳಿದಂತೆ ನಮ್ಮಲ್ಲಿರುವ ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಂಡು ಮೊಬೈಲ್‌ಗಳನ್ನು ಪತ್ತೆ ಹಚ್ಚುವ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ,” ಎನ್ನುವುದು ಆ ಹಿರಿಯ ಪೊಲೀಸ್ ಅಧಿಕಾರಿಯ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : Bangalore-crime-guard-up-while-using-phones