ತಂಬಾಕು ಸೇವನೆಗೆ ದೇಶದಲ್ಲಿ ನಿತ್ಯ 2,700 ಮಂದಿ ಬಲಿ

Promotion

ಬೆಂಗಳೂರು:ಮೇ-31: ದೇಶದಲ್ಲಿ ನಿತ್ಯ 27.4 ಕೋಟಿ ಜನ ವಿವಿಧ ರೂಪಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು, ಪ್ರತಿದಿನ 2,700 ಮಂದಿ ಕ್ಯಾನ್ಸರ್​ನಿಂದ ಸಾವನ್ನಪ್ಪುತ್ತಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯ ದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುತ್ತಿದ್ದು, ನಿತ್ಯ 410 ಮಂದಿ ಬಲಿಯಾಗುತ್ತಿದ್ದಾರೆ.

ತಂಬಾಕು ಎಲೆ ಯಲ್ಲಿ 4 ಸಾವಿರ ರಾಸಾಯನಿಕ ಅಂಶ ಗಳಿದ್ದು, ಅದರಲ್ಲಿ 400 ಕಾಸ್ಮೋಜೆನಿಕ್ ರಾಸಾಯನಿಕಗಳು ಅಪಾಯಕಾರಿಯಾಗಿವೆ. ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ಸೇವನೆ ಜನಸಾಮಾನ್ಯರ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಆರಂಭದಲ್ಲಿ ಮನುಷ್ಯನ ಏಕಾಗ್ರತೆ ಕೊಲ್ಲುವ ತಂಬಾಕು, ದಿನಕಳೆದಂತೆ ಜೀವವನ್ನೇ ಬಲಿತೆಗೆದುಕೊಳ್ಳುತ್ತಿದೆ. ಕೇವಲ 1 ಸಿಗರೇಟ್ ಸೇದಿದರೆ ಆಯಸ್ಸು 11 ನಿಮಿಷ ಕಡಿಮೆಯಾಗುತ್ತದೆ. ಮಾದಕ ವಸ್ತು ಕೊಕೇನ್ ಮಿದುಳು ಪ್ರವೇಶಿಸಲು 14 ಸೆಕೆಂಡ್ ತೆಗೆದುಕೊಂಡರೆ, ನಿಕೋಟಿನ್ ಒಳಗೊಂಡ ಬೀಡಿ, ಸಿಗರೇಟ್, ಹೊಗೆಸೊಪ್ಪು ಮತ್ತು ನಶ್ಯೆ ಕೇವಲ 7 ಸೆಕೆಂಡ್​ನಲ್ಲೇ ಮಿದುಳು ಪ್ರವೇಶಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯ.

2 ಸಾವಿರ ರೂ. ದಂಡಕ್ಕೆ ಸಲಹೆ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ದಂಡದ ಮೊತ್ತವನ್ನು 200 ರೂ. ನಿಂದ 2 ಸಾವಿರ ರೂ.ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲಹೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಲು ಪೂರಕ ವಾತಾವರಣ ಸೃಷ್ಠಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕ್ಷಯರೋಗ ಮತ್ತು ತಂಬಾಕು ನಿಯಂತ್ರಣಾಧಿಕಾರಿ ಡಾ.ಜಿ.ಎ.ಶ್ರೀನಿವಾಸ್ ತಿಳಿಸಿದ್ದಾರೆ.

ಯುವಪೀಳಿಗೆಯಲ್ಲಿ ತಂಬಾಕು ಸೇವನೆ ಹೆಚ್ಚುತ್ತಿದ್ದು, ಗಂಟಲು, ಶ್ವಾಸಕೋಶ ಕ್ಯಾನ್ಸರ್ ಮತ್ತು ಮಕ್ಕಳು ಆಗದೆ ಇರುವುದು ಕಂಡುಬರುತ್ತಿದೆ. ತಂಬಾಕು ಸೇವನೆಯಿಂದ ದೂರ ಇರುವುದು ಒಳಿತು.

| ಡಾ.ಸಿ.ರಾಮಚಂದ್ರ ನಿರ್ದೇಶಕ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ

ವ್ಯಸನದಿಂದ ಬಂಜೆತನ, ಬದುಕು ಜೋಪಾನ
ಬೆಂಗಳೂರು: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಹಿಳೆಯರಲ್ಲಿ ಶೇ.60 ಬಂಜೆತನ ಹೆಚ್ಚಾಗಲಿದೆ. ತಂಬಾಕು ಸೇವನೆ ಶ್ವಾಸಕೋಶ, ಹೃದಯ, ಕಿಡ್ನಿ ಮೇಲೆ ಮಾತ್ರವಲ್ಲದೆ ವೀರ್ಯ ಉತ್ಪಾದನೆ ಮೇಲೂ ಕೆಟ್ಟಪರಿಣಾಮ ಬೀರಲಿದೆ ಎಂದು ಇಂದಿರಾ ಐವಿಎಫ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಕೃತಕ ಗರ್ಭಧಾರಣೆ ತಜ್ಞ ಡಾ. ವಿನೋದ್​ಕುಮಾರ್ ತಿಳಿಸಿದ್ದಾರೆ.

ಮಹಾನಗರಗಳಲ್ಲಿ ನೆಲೆಸುವ ನಾಲ್ವರು ಮಹಿಳೆಯರಲ್ಲಿ ಒಬ್ಬರು ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಸಿಗರೇಟ್ ಸೇವನೆಯಿಂದ ಗರ್ಭ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ 30 ವರ್ಷ ದಾಟಿದ ಮಹಿಳೆಯರಲ್ಲಿ ಸಂತಾನ ಉತ್ಪತ್ತಿ ಕಡಿಮೆಯಾಗುತ್ತದೆ. ಆದರೆ, ತಂಬಾಕು ಉತ್ಪನ್ನ ಬಳಸುವ ಮಹಿಳೆಯರು ಇನ್ನೂ ಕಡಿಮೆ ವಯಸ್ಸಿನಲ್ಲಿ ಗರ್ಭಧರಿಸುವ ಶಕ್ತಿ ಕಳೆದುಕೊಳ್ಳುತ್ತಾರೆ. ಋತುಚಕ್ರದಲ್ಲೂ ಏರುಪೇರಾಗುವ ಸಾಧ್ಯತೆಗಳಿವೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನಲ್ಲಿ ತಂಬಾಕು ಉತ್ಪನ್ನಗಳ ಬಳಕೆದಾರರು ಕಡಿಮೆಯಾದರೂ ಅದರಿಂದ ಬರುವ ಕಾಯಿಲೆಗಳಿಗೆ ತುತ್ತಾಗುವವರ ಪ್ರಮಾಣ ಹೆಚ್ಚಾಗುತ್ತಿದೆ. ಕೆಲವರು ಸಂತಾನಶಕ್ತಿ ಕಳೆದುಕೊಂಡರೆ ಕೃತಕ ಗರ್ಭಧಾರಣೆಯಿಂದ ಮಕ್ಕಳನ್ನು ಪಡೆಯಬಹುದು ಎಂದು ಕೊಂಡಿರುತ್ತಾರೆ. ಶೇ.14 ಕೃತಕ ಗರ್ಭಧಾರಣೆಗೂ ಕಷ್ಟವಾಗುತ್ತಿದೆ. ಅಂಡಾಣು ಉತ್ಪಾದನೆಗೆ ಔಷಧ ಅಗತ್ಯವಾಗುತ್ತದೆ. ಸಾಮಾನ್ಯ ಕೃತಕ ಗರ್ಭಧಾರಣೆ ಮಹಿಳೆಯರಿಗೆ ಹೋಲಿಸಿದರೆ ಧೂಮಪಾನ ಮಾಡುವ ಮಹಿಳೆಯರಿಗೆ ಗರ್ಭಧಾರಣೆ ಶಕ್ತಿ ಕಡಿಮೆ. ಇದಲ್ಲದೆ, ತಂಬಾಕು ಸೇವೆಯಿಂದ ರಕ್ತ ಪರಿಚಲನೆ ಮೇಲೂ ದುಷ್ಪರಿಣಾಮ ಬೀರಲಿದೆ. ಧೂಮಪಾನ ಸೇವನೆ ಮಾಡುವ ಪುರುಷ ಅಥವಾ ಮಹಿಳೆಯರ ರಕ್ತ ಕಣದ ಮೇಲೆ ಪರಿಣಾಮ ಬೀರಿ ಸಂಭೋಗ ಕ್ರಿಯೆಯಲ್ಲಿ ವಿಫಲರಾಗುತ್ತಾರೆ. ಶಕ್ತಿಯುತ ವೀರ್ಯ ಉತ್ಪಾದನೆ ಆಗದೆ ಮಕ್ಕಳ ಭಾಗ್ಯವನ್ನೇ ಕಳೆದುಕೊಳ್ಳುವ ಸಂಭವ ಇರುತ್ತದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೃಪೆ:ವಿಜಯವಾಣಿ

ತಂಬಾಕು ಸೇವನೆಗೆ ದೇಶದಲ್ಲಿ ನಿತ್ಯ 2,700 ಮಂದಿ ಬಲಿ

around-2700-person-die-daily-because-tobacco-consumption