ಅಮೃತ ಸಿಂಚನ – 39: ಮುಂದಿನ ಜನ್ಮದವರೆಗೂ ಕಾಯಬೇಕೇ?

Promotion

ಅಮೃತ ಸಿಂಚನ – 39: ಮುಂದಿನ ಜನ್ಮದವರೆಗೂ ಕಾಯಬೇಕೇ?

ಮೈಸೂರು,ಮೇ,10,2021(www.justkannada.in):  ಜಾತಿಯಿಂದ ಒಕ್ಕಲಿಗರು ಅವರು. ಸಿಗರೇಟು ಸೇದುತ್ತಿದ್ದರು. ಮಾಂಸಾಹಾರವನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿದ್ದರು. ಆಗ – ಈಗ ಮದ್ಯಪಾನ ಮಾಡುವ ಅಭ್ಯಾಸವೂ ಇದ್ದಿತವರಿಗೆ. ಆದರೆ ಇವರು ವಿದ್ಯಾವಂತರು. ಪಿ ಎಚ್ ಡಿ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋದರೆ ಉಳಿದವರನ್ನೆಲ್ಲ ಒಳಗೆ ಕಳಿಸಿ ತಾವು ಮಾತ್ರ ಹೊರಗಡೆಯೇ ಇರುತ್ತಿದ್ದರು. ದೇವರಲ್ಲಿ ಇವರಿಗೆ ನಂಬಿಕೆ ಇರಲಿಲ್ಲ.jk

ಇನ್ನು ಸಾಧು-ಸಂತರ ವಿಚಾರದಲ್ಲೂ ಇವರಿಗೆ ಅನಾದರವಿತ್ತು. ನಮ್ಮ ಧಾರ್ಮಿಕ ಗ್ರಂಥಗಳ ಬಗೆಗೆ ಉಪೇಕ್ಷೆಯಿತ್ತು. ನಾಸ್ತಿಕವಾದವನ್ನು, ಎಡಪಂಥೀಯ ವಿಚಾರಧಾರೆಗಳನ್ನು ಒಂದಿಷ್ಟು ಓದಿಕೊಂಡು ಉಳಿದ ವಿಚಾರಧಾರೆಗಳನ್ನು ಖಂಡಿಸುತ್ತಿದ್ದರು.

ಬೇಡನು ವಾಲ್ಮೀಕಿ ಆಗುವಂತಹ ಒಂದು ಪರ್ವಕಾಲ ಬಂತು ನೋಡಿ. ಅದಾವುದೋ ಒಂದು ಸಂದರ್ಭದಲ್ಲಿ ಕೇವಲ ಕುತೂಹಲಕ್ಕಾಗಿ ಅಕಸ್ಮಾತ್ ಕೈಗೆ ಸಿಕ್ಕಿದ ಅದ್ವೈತಸಿದ್ಧಾಂತದ ಒಂದು ಪುಸ್ತಕವನ್ನು ಇವರು ಓದಿದರು. ಓದಿ ಅವಾಕ್ಕಾದರು. ಇಂತಹ ಅದ್ಭುತ ಸಿದ್ಧಾಂತವನ್ನು ಪ್ರಚುರಪಡಿಸಿದ ಮಹನೀಯರು ಯಾರೆಂದು ಅವರು ಹುಡುಕಿದರು. ಅದು ಆಚಾರ್ಯ ಶಂಕರರು ಎಂದು ಅವರಿಗೆ ತಿಳಿಯಿತು. ನಂತರ ಆಚಾರ್ಯ ಶಂಕರರ ಜೀವನಚರಿತ್ರೆಯನ್ನು ಇವರು ಕುತೂಹಲದಿಂದ ಓದತೊಡಗಿದರು. ಶಂಕರಭಗವತ್ಪಾದರು ಇವರನ್ನು ಕೃಪಾದೃಷ್ಟಿಯಿಂದ ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟರು. ಹೀಗಾದಾಗ ಆತ ಗಾಬರಿ ಬಿದ್ದರು. ಏನು ಮಾಡಿದರೂ ಶಂಕರರ ಮೋಡಿಯಿಂದ ಹೊರಬರಲು ಇವರಿಂದ ಸಾಧ್ಯವಾಗದೆ ಹೋಯಿತು.

ನಿಧನಿಧಾನವಾಗಿ ಅದ್ವೈತಕ್ಕೆ ಸಂಬಂಧಿಸಿದ ಬೇರೆ ಬೇರೆ ಪುಸ್ತಕಗಳ ಅಧ್ಯಯನಕ್ಕೆ ಪ್ರಾರಂಭಿಸಿದರು. ಲ. ನ. ಶಾಸ್ತ್ರಿಯವರು ಬರೆದ ಶೃಂಗೇರಿ ಗುರುಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ತಿರುವಿ ಹಾಕಿದರು. ಚಂದ್ರಶೇಖರ ಭಾರತೀ ಸ್ವಾಮಿಗಳ ಕೃಪೆಯು ಇವರ ಮೇಲೆ ಬಿದ್ದ ಹಾಗೆ ಕಾಣುತ್ತದೆ. ಬೀಡಿ ಸಿಗರೇಟುಗಳು ಇವರಿಂದ ದೂರವಾದವು. ಮದ್ಯಪಾನಾಸಕ್ತಿ ಇವರನ್ನು ಬಿಟ್ಟು ಹೊಡಿತು.

ಅದೊಂದು ದಿನ ಪೇಟೆಗೆ ಹೋಗಿದ್ದಾಗ ಫೋಟೋ ಫ್ರೇಮ್ ವರ್ಕ್ಸ್ ಅಂಗಡಿಯೊಂದರಲ್ಲಿ ಕಣ್ಣಿಗೆ ಬಿದ್ದ ಶಂಕರಾಚಾರ್ಯರ ಸುಂದರ ಚಿತ್ರಪಟವನ್ನು ತಂದು ಮನೆಯಲ್ಲಿ ನೇತುಹಾಕಿಯೂಬಿಟ್ಟರು.

ಇವರು ಹೇಳುತ್ತಾರೆ, “ಈ ಆಚಾರ್ಯ ಪುರುಷರ ಚಿತ್ರಪಟವು ನನ್ನ ಮನೆಗೆ ಬಂದ ಕ್ಷಣದಿಂದ ಮಾಂಸಾಹಾರವನ್ನು ಇಲ್ಲಿ ತಯಾರಿಸುವುದು ಸರಿಯಲ್ಲ ಅಂತನಿಸಿ ಅಂದಿನಿಂದ ನಾವೆಲ್ಲ ಸಂಪೂರ್ಣ ಸಸ್ಯಾಹಾರಿಗಳಾಗಿ ಬಿಟ್ಟೆವು” ಅಂತ. ಇವರೆಲ್ಲ ಅಂದರೆ ಗಂಡ ಹೆಂಡತಿ ಅವರ ಎರಡು ಹೆಣ್ಣು ಮಕ್ಕಳು.

ಇವರ ಕಥೆ ಇಷ್ಟಕ್ಕೇ ನಿಲ್ಲಲಿಲ್ಲ. ರುದ್ರ ನಮಕಾದಿ ವೇದಮಂತ್ರಗಳನ್ನೂ, ಪುರುಷಸೂಕ್ತದಗಳನ್ನೂ ಅರಿತವರಿಂದಲೂ, ಧ್ವನಿಮುದ್ರಿಕೆಗಳ ಸಹಾಯದಿಂದಲೂ ಅಭ್ಯಾಸ ಮಾಡಿಕೊಂಡರು. ವೇದೋಪನಿಷತ್ತುಗಳ ಬಗೆಗೆ ಸಿಕ್ಕಿದ್ದನ್ನೆಲ್ಲ ಓದಿದರು. ಪ್ರತಿ ದಿನವೂ ವೇದಮಂತ್ರಗಳಿಂದಲೂ, ಭಜನೆಗಳಿಂದಲೂ ಅವರ ಮನೆಯಲ್ಲಿ ದೇವತಾರ್ಚನೆ ನಡೆಯುತ್ತದೆ. ಇತ್ತೀಚೆಗೆ ಇವರು ಉಪನಯನವನ್ನೂ ಮಾಡಿಸಿಕೊಂಡರು ಎಂಬ ವಾರ್ತೆ ನನಗೆ ಬಂತು.

ಯಾರಾದರೂ ನಾಸ್ತಿಕರು ದೇವರು-ಧರ್ಮಗಳ ವಿಚಾರದಲ್ಲಿ ವಿತಂಡವಾದ ಮಾಡಲು ಬಂದರೆ, ” ಬಿಡಿ ಸಾರ್, ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಅಂತಹ ಪುಸ್ತಕಗಳನ್ನು ಓದಿ ಸಮಯ ಹಾಳು ಮಾಡಿಕೊಂಡೆ. ಆ ಸುದ್ದಿ ಬಿಡಿ”- ಎನ್ನುತ್ತಾರಿವರು. ಗುರುಹಿರಿಯರು, ಸಾಧು-ಸಂತರ ಬಗೆಗೆ ಟೀಕೆ ನಡೆಯುತ್ತಿರುವ ಜಾಗದಲ್ಲಿ ಇವರು ಈಗ ನಿಲ್ಲುವುದೂಇಲ್ಲ.

ನಾನು ನನ್ನ ಹೆಂಡತಿ ಅವರ ಮನೆಗೆ ಹೋದರೆ ಹೋದಕೂಡಲೇ ಅವರಿಬ್ಬರೂ ಹಾಗೂ ಮಕ್ಕಳು ನಮ್ಮಿಬ್ಬರಿಗೂ ಪಾದಮುಟ್ಟಿ ನಮಸ್ಕರಿಸುತ್ತಾರೆ. ನಾವು ಹಿಂದಕ್ಕೆ ಬರುವಾಗಲೂ ಪುನಹ ಈ ಪ್ರಕ್ರಿಯೆ ನಡೆಯುತ್ತದೆ. ಈಗ ಇವರ ಇಡೀ ಸಂಸಾರ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಿದೆ. ನೋಡಿದರೆ ಬಹಳ ಸಂತೋಷವಾಗುತ್ತದೆ.

“ಇವರಿಗೆ ಏನಾಯಿತು? ಸರಿ ಇದ್ದರಲ್ಲ?” ಅಂತ ಕೆಲವರೆಂದಾಗ ನಾನು ಹೇಳಿದೆ: “ವ್ಯಕ್ತಿಯೊಬ್ಬ ಬೇಡ ನಾಗಿಯೇ ಕೊನೆಯವರೆಗೂ ಇರಬೇಕೇ? ಆತ ವಾಲ್ಮೀಕಿ ಆಗುವುದೇ ಬೇಡವೇ? ಅಥವಾ ಬ್ರಾಹ್ಮಣ್ಯವನ್ನು ಪಡೆಯಲು ಅವರು ಮುಂದಿನ ಜನ್ಮದವರೆಗೂ ಕಾಯುತ್ತಿರಬೇಕೇ?” ಅಂತ.

ಕೆಲವೊಮ್ಮೆ ಲೌಕಿಕದಲ್ಲೂ ಹೀಗೆ ನಡೆಯುವುದುಂಟು: ಒಳ್ಳೆಯ ಬುದ್ಧಿ ಶಾಲಿಯಾದ ಹುಡುಗನನ್ನು 1-2-3 ನೇ ತರಗತಿಗೆ ಕಳಿಸಿದೆ ಯೇ ನೇರವಾಗಿ 4ನೇ ತರಗತಿಗೆ ಕೂರಿಸುವುದು. ಇದೂ ಹಾಗೆಯೇ. ಒಂದೇ ಜನ್ಮದಲ್ಲಿ ಅರ್ಹರು ಸಾಧನೆ ಮಾಡಿದವರು ಬ್ರಾಹ್ಮಣ್ಯವನ್ನು ಸಂಪಾದನೆ ಮಾಡಲಿ ಅಲ್ಲವೇ? ಹೆಚ್ಚು ಸಾಧನೆ ಮಾಡಿದವರಿಗೆ ಪ್ರಮೋಷನ್ ಕೊಡಬಹುದಲ್ಲ.

ಇದೇ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ನೋಡೋಣ: ಬ್ರಾಹ್ಮಣ ಕುಲದಲ್ಲಿ ಹುಟ್ಟಿಯೂ ನಿಕೃಷ್ಟ ರೀತಿಯಲ್ಲಿ ಜೀವಿಸುತ್ತಾ ಬ್ರಾಹ್ಮಣ್ಯದಿಂದ ಬಹಳ ದೂರ ಸರಿದವರ ಬಗೆಗೆ ಸಂತಾಪವಾಗುತ್ತದೆ.ಇವರೆಲ್ಲ ಎಂತಹವರೆಂದರೆ, ಡಿಗ್ರಿ ತರಗತಿಗೆ ಹೋದವರು ಶಿಶುವಿಹಾರದ ತರಗತಿಗೆ ಓದಲು ಹೋದಂತೆ! ಇದರಿಂದಲೇ ಗೀತೆಯಲ್ಲಿ ಕೃಷ್ಣ ಹೇಳಿರುವುದು, “ಗುಣ- ಕರ್ಮಗಳ ಆಧಾರದಿಂದಲೇ ವರ್ಣದ ನಿರ್ಧಾರ, ಜನ್ಮದಿಂದಲ್ಲ” – ಅಂತ.

– ಜಿ. ವಿ. ಗಣೇಶಯ್ಯ.