ಅಗ್ರಿ ಟೂರಿಸಂ ಯೋಜನೆ ರೂಪಿಸಲು ಚಿಂತನೆ-  ಸಚಿವ ನಾರಾಯಣಗೌಡ ಹೇಳಿಕೆ

Promotion

ತುಮಕೂರು,ಸೆಪ್ಟಂಬರ್,9,2020(www.justkannada.in):  ಕೃಷಿಗೆ ಪ್ರವಾಸೋದ್ಯಮ ಸ್ಪರ್ಶ ನೀಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಚಿವರಾದ ಕೆ.ಸಿ ನಾರಾಯಣಗೌಡ ಅವರು ತಿಳಿಸಿದರು.Agri Tourism- project-Minister- Narayana Gowda.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ನಾರಾಯಣಗೌಡ,  ಅಗ್ರಿ ಟೂರಿಸಂ ಯೋಜನೆಯಿಂದ ನಗರ ಪ್ರದೇಶದಲ್ಲಿರುವ ಯುವ ಪೀಳಿಗೆಗೆ ಕೃಷಿ ಆಧಾರಿತ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಾಹಿತಿ ತಿಳಿಸುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕುಣಿಗಲ್ ತಾಲೂಕು ಮತ್ತು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯಲ್ಲಿರುವ ಮೈಸೂರು ಬಿತ್ತನೆ ಪ್ರದೇಶದಲ್ಲಿ 911.56 ಹೆಕ್ಟೇರ್ ಪ್ರದೇಶದಲ್ಲಿ ಶುದ್ಧ ಮೈಸೂರು ರೇಷ್ಮೆ ಬೆಳೆಯುತ್ತಿದ್ದಾರೆ. ಅಲ್ಲದೇ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳು ದ್ವಿತಳಿ ಬಿತ್ತನೆ ಪ್ರದೇಶವಾಗಿವೆ. ವಿಶೇಷ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ 19.347 ಲಕ್ಷ ದ್ವಿತಳಿ ಸಂಕರಣ ಮೊಟ್ಟೆ ಚಾಕಿ ಮಾಡಿ 1274 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಮಾಡಲಾಗಿದೆ. ಒಟ್ಟು ಗೂಡು ಉತ್ಪಾದನೆಯಲ್ಲಿ ಶೇ.79 ದ್ವಿತಳಿ ಗೂಡು ಉತ್ಪಾದಿಸಿ ರಾಜ್ಯದಲ್ಲಿ 2ನೇ ವಿಶೇಷ ಸ್ಥಾನ ಪಡೆದಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೆ, ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ರೇಷ್ಮೆ ಮಾರಾಟ ಮತ್ತು ಕೊಳ್ಳುವವರಿಗೆ ಮಾರ್ಕೆಟಿಂಗ್ ವ್ಯವಸ್ಥೆ ಮಾಡಬಹುದು. ಅದಕ್ಕಾಗಿ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಗೊಳಪಡುವ ಜಾಗವನ್ನು ಸರ್ವೇ ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ,  ನಂತರ ಪ್ರಗತಿ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.Agri Tourism- project-Minister- Narayana Gowda.

ಕೋವಿಡ್-19 ಸಾಂಕ್ರಾಮಿಕ ರೋಗದ ತುರ್ತು ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಸುಮಾರು 12.50 ಟನ್‍ಗಳಷ್ಟು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹಾಪ್‍ಕಾಮ್ಸ್, ರೈತ ಉತ್ಪಾದಕ ಸಂಸ್ಥೆ ಮತ್ತು ಎನ್.ಜಿ.ಒಗಳ ಸಹಯೋಗದೊಂದಿಗೆ 25 ವಾಹನಗಳಲ್ಲಿ ನಗರದ 35 ವಾರ್ಡ್‍ಗಳಲ್ಲಿ ವಿತರಿಸಲಾಯಿತು. ತಾಲೂಕು ಮಟ್ಟದದಲ್ಲಿ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿದ್ದೇವೆ ಎಂದು ತೋಟಗಾರಿಕೆ ಉಪನಿರ್ದೇಶಕ ರಘು ಅವರು ಸಚಿವರ ಗಮನಕ್ಕೆ ತಂದಾಗ, ಕೋವಿಡ್-19 ಸಂದರ್ಭದಲ್ಲಿ ಹಣ್ಣು-ತರಕಾರಿಗಳನ್ನು ರೈತರಿಂದ ಖರೀದಿ ಮಾಡಿ ಮಾರಾಟ ಮಾಡಿರುವುದರಲ್ಲಿ ರಾಜ್ಯದಲ್ಲಿ ತುಮಕೂರು 2ನೇ ಸ್ಥಾನದಲ್ಲಿ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ಡ್ರ್ಯಾಗನ್ ಫ್ರ್ಯೂಟ್ಸ್‍ಗೆ ಹೆಚ್ಚಿನ ಬೇಡಿಕೆಯಿದ್ದು, ಅದನ್ನು ಜಿಲ್ಲೆಯ ಶಿರಾ ಮತ್ತು ತುರವೇಕೆರೆ ತಾಲೂಕಿನಲ್ಲಿ ಡ್ರ್ಯಾಗನ್ ಫ್ರ್ಯೂಟ್ಸ್ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ  ಬೆಳೆಯಲು ಪ್ರಾಮುಖ್ಯತೆ ನೀಡಿ, ಈ ಹಣ್ಣನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಿ, ನಿಂಬೆ ಬೆಳೆಗಾರರಿಗೆ ಅನುಕೂಲವಾಗುವಂತೆ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು, ಸಮುದಾಯ ಕೃಷಿಹೊಂಡಗಳು ತುಂಬಿದೆ ಎಂದು ಸಚಿವರ ಗಮನಕ್ಕೆ ತೋಟಗಾರಿಕೆ ಅಧಿಕಾರಿ ತಂದರು.

ಪೌರಾಡಳಿತಕ್ಕೆ ಸಂಬಂಧಪಟ್ಟಂತೆ ಎಸ್.ಎಫ್.ಸಿ(ಕುಡಿಯುವ ನೀರು)ಗಾಗಿ 150 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ನಗರ ಸ್ಥಳೀಯ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 100 ಲಕ್ಷ ರೂ. ಖರ್ಚು ಮಾಡಿದ್ದು, 58 ಲಕ್ಷ ಬಾಕಿಯಿದೆ. ನೀರಿನ ತೆರಿಗೆ ವಸೂಲಾತಿ 9 ಕೋಟಿ ರೂ. ನಿಗಧಿಯಾಗಿದ್ದು, ಈವರೆಗೆ 1 ಕೋಟಿ ರೂ. ತೆರಿಗೆಯನ್ನು ವಸೂಲಿ ಮಾಡಲಾಗಿದ್ದು, 8 ಕೋಟಿ ರೂ. ಬಾಕಿಯಿರುವುದಾಗಿ ಪೌರಾಡಳಿತ ಯೋಜನಾ ಅಧಿಕಾರಿ ಬಿ.ಶುಭಾ ಅವರು ಸಚಿವರಿಗೆ ಮಾಹಿತಿ  ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನೀರಿನ ವಸೂಲಾತಿ ಕಡಿಮೆಯಿದ್ದು, ಬಾಕಿಯಿರುವ ನೀರಿನ ತೆರಿಗೆ ಸಂಗ್ರಹವನ್ನು ಮಾಡುವಂತೆ ಸೂಚಿಸಿದರು.

ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ನಗರದಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ್ಣು-ತರಕಾರಿ ಮಾರಾಟ  ಕಟ್ಟಡವನ್ನು ನಿರ್ಮಿಸಲು ಇಲಾಖೆಯಿಂದ ಎನ್‍ಓಸಿ ಕೊಡಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಜಯರಾಂ, ವೀರಭದ್ರಯ್ಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಸಭೆಗೂ ಮುನ್ನಾ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯಿರುವ ಬಿತ್ತಿಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು.

Key words: Agri Tourism- project-Minister- Narayana Gowda.