3ನೇ ಅಲೆ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ನೀಡಿದ ಸಲಹೆ ಏನು..?  ವಿವರ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಜೂನ್,22,2021(www.justkannada.in): 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಆಸ್ಪತ್ರೆ, ಮಕ್ಕಳ ತೀವ್ರ ನಿಗಾ ಘಟಕ ತೆರೆಯಲು ತಜ್ಞರ ಸಮಿತಿ ಸಲಹೆ ನೀಡಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.jk

3ನೇ ಅಲೆ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ಇಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತು. ನಂತರ ತಜ್ಞರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು. ಇದಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ ವಿವರ ನೀಡಿದ ಅವರು, ರಾಜ್ಯದಲ್ಲಿ 3ನೇ ಅಲೆ ಸಂಬಂಧ ಚರ್ಚೆ ನಡೆಸಿದ್ದೇವೆ. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಮೇಲೆ ಉಂಟಾಗುವಂತ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳ ಆಸ್ಪತ್ರೆ, ತೀವ್ರ ನಿಗಾ ಘಟಕ ಸ್ಥಾಪನೆ, ಮೆಡಿಕಲ್ ಕಾಲೇಜು, ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಹಾರೈಕೆ ಕೇಂದ್ರಗಳ ತೆರಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಜ್ಞರ ಸಮಿತಿ ಸೂಚಿಸಿದೆ.

ಕೊರೋನಾ 3ನೇ ಅಲೆಯ ಸಂದರ್ಭದಲ್ಲಿ ವೈದ್ಯರು, ನರ್ಸ್ ಕೊರತೆಯಾಗದಂತೆ  ವೈದ್ಯರು, ನರ್ಸ್ ಗಳ ನೇಮಕ ಮಾಡಿಕೊಳ್ಳಲು ಸಲಹೆ ನೀಡಿದೆ. ಮಕ್ಕಳಲ್ಲಿ ಉಂಟಾಗುವಂತ ಅಪೌಷ್ಠಿಕತೆಯನ್ನು ನಿವಾರಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು.  ಆಕ್ಸಿಜನ್ ಕೊರತೆ  ನಿವಾರಣೆಗೂ ಸೂಚನೆ ನೀಡಿದೆ. ಲಸಿಕೆ ಪರಿಣಾಮಕಾರಿಯಾಗಿ ಹಾಕಬೇಕು.  18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಸಲಹೆ ನೀಡಿರುವುದಾಗಿ ಸಿಎಂ ಬಿಎಸ್ ವೈ ತಿಳಿಸಿದರು.

ಇನ್ನು ರಾಜ್ಯದಲ್ಲಿ ಶಾಲಾ – ಕಾಲೇಜು ಪುನಾರಂಭದ ವಿಚಾರವಾಗಿ  ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಅಪೌಷ್ಠಿಕತೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆಯಂತಹ ಸಮಸ್ಯೆ ನಿವಾರಣೆಗಾಗಿ ಶಾಲೆಗಳನ್ನ ತೆರೆಯೋದು ಒಳ್ಳೆಯದು ಎಂದು ತಜ್ಞರ ಸಮಿತಿ ಹೇಳಿದೆ. ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಕ್ಕೆ ಸಲಹೆ ನೀಡಿದೆ. ಶಾಲೆಯ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ಲಸಿಕೆ ನೀಡಬೇಕು. ಮೊದಲು ಇಂಜಿನಿಯರಿಂಗ್​, ವೈದ್ಯಕೀಯ ಕಾಲೇಜುಗಳನ್ನ ಆರಂಭಿಸಬೇಕು. ಇದಕ್ಕೂ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ನುಡಿದರು.

Key words: advice -experts committee-3rd wave- preparation-CM BS Yeddyurappa