ಕವಿತೆಯ ವಿರುದ್ಧದ ಕ್ರಮಕ್ಕೆ ಖ್ಯಾತ ಸಾಹಿತಿ, ವಿಮರ್ಶಕ ಎಸ್  ದಿವಾಕರ್ ಖಂಡನೆ ….

ಮೈಸೂರು,ಜ,31,2020(www.justkannada.in): ಇಂತಹದ್ದನ್ನೇ ಬರಿ ಎಂದು ಪ್ರಭುತ್ವ ಯಾವುದೇ ಬರಹಗಾರನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಭುತ್ವದ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ಖ್ಯಾತ ಸಾಹಿತಿ, ವಿಮರ್ಶಕ ಎಸ್ ದಿವಾಕರ್ ತಿಳಿಸಿದರು.

‘ಬಹುರೂಪಿ’ ಪ್ರಕಟಿಸಿದ ದಿವಾಕರ್ ಅವರ ಕವನ ಸಂಕಲನ ‘ಸೋತ ಕಣ್ಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಅವಧಿ’ ಅಂತರ್ಜಾಲ ತಾಣ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕವಿಗೆ ಬರೆಯುವ ಸ್ವಾತಂತ್ರ್ಯ ಅತಿ ಮುಖ್ಯ. ಸಿರಾಜ್ ಬಿಸರಳ್ಳಿ ವಿರುದ್ಧದ ಕ್ರಮ ಈ ರೀತಿಯ ಸ್ವಾತಂತ್ರ್ಯದ ಹರಣ. ಏನು ಬರೆಯಬೇಕು ಹೇಗೆ ಬರೆಯಬೇಕು ಎಂದು ಯಾವುದೇ ಪ್ರಭುತ್ವ ನಿರ್ದೇಶಿಸಲು ಸಾಧ್ಯವಿಲ್ಲ. ಹಾಗೇನಾದರೂ ನಿರ್ದೇಶಿಸಿದರೆ ಎಲ್ಲಾ ಲೇಖಕರೂ ಅದರ ವಿರುದ್ಧ ನಿಲ್ಲಬೇಕು ಎಂದು ದಿವಾಕರ್ ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಚ ಹ ರಘುನಾಥ್ ಅವರು ಮಾತನಾಡಿ ಈ ಹಿಂದೆ ಗೋಪಾಲಕೃಷ್ಣ ಅಡಿಗರು ಕವಿತೆಗಳನ್ನು ಬರೆದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿದ್ದನ್ನು ಸ್ಮರಿಸಿದರು. ದಿವಾಕರ್ ಅವರ ಪ್ರಸ್ತುತ ಸಂಕಲನ ರಾಜಕೀಯ ಆಶಯದ ವಸ್ತುವನ್ನು ಹೊಂದಿದ್ದು ಉತ್ತಮ ಶಿಲ್ಪವನ್ನು ಹೊಂದಿದೆ ಎಂದು ಪ್ರಶಂಶಿಸಿದರು.

ಬೇಂದ್ರೆ ದಿನದ ಅಂಗವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಎಸ್  ದಿವಾಕರ್ ಅವರು ಬೇಂದ್ರೆ ಕವಿತೆಗಳನ್ನು ವಾಚಿಸಿ ಬೇಂದ್ರೆಯವರ ಅನನ್ಯತೆಯ ಲೋಕವನ್ನು ತೆರೆದಿಟ್ಟರು. ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಈ ಕೃತಿ bahuroopi.in ನಲ್ಲಿ ಕೊಳ್ಳಲು ಲಭ್ಯವಿದೆ.

Key words: Action –against- poetry- critic- S Divakar -condemns