ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರಕ್ಕೆ ಆಗ್ರಹ: ಹಿಂದುಳಿದ ಜಾತಿಗಳ ಒಕ್ಕೂಟದ ಹೋರಾಟಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ…

ಬೆಂಗಳೂರು,ಅಕ್ಟೋಬರ್,3,2020(www.justkannada.in):  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.jk-logo-justkannada-logo

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ಧರಾಮಯ್ಯ, ವರದಿ ಸ್ವೀಕಾರ ಮಾಡಲು ಸರ್ಕಾರ ಹಿಂದೇಟು ಹಾಕಿದರೆ ಒಕ್ಕೂಟ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈ ಹೋರಾಟಕ್ಕೆ ನನ್ನ ಬೆಂಬಲವೂ ಇರಲಿದೆ ಎಂದು ಘೋಷಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ಧವಾಗಿರಲಿಲ್ಲ. ಹೀಗಾಗಿ ಸ್ವೀಕಾರ ಮಾಡುವ ಪ್ರಶ್ನೆಯೇ ಇರಲಿಲ್ಲ. ಈ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :

ಆರ್ಥಿಕ ಮತ್ತು ಸಾಮಾಜಿಕ ಜನ ಗಣತಿ ಕೊನೆಯ ಬಾರಿಗೆ ಆಗಿದ್ದು 1931ರಲ್ಲಿ. ಬಳಿಕ ವಿಶ್ವ ಯುದ್ಧ ಆಗಿದ್ದರಿಂದ ಜನ ಗಣತಿ ನಡೆಯಲಿಲ್ಲ. ಹೀಗಾಗಿ ಆರ್ಥಿಕ ಮತ್ತು ಸಾಮಾಜಿಕ ಆಧಾರದ ಮೇಲೆಯೂ ಗಣತಿ ನಡೆಯಲಿಲ್ಲ. ಮೀಸಲು ವಿಚಾರದಲ್ಲಿ ವಿಚಾರಣೆಗಳು ನಡೆದಾಗ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗಳು ಜಾತಿ ಮತ್ತು ಜನಗಣತಿ ಬಗ್ಗೆ ವರದಿ ಹಾಗೂ ದಾಖಲೆಗಳನ್ನು ಕೇಳುತ್ತಿದ್ದವು. ನ್ಯಾಯಮೂರ್ತಿಗಳೂ ಈ ಬಗ್ಗೆ ಮಾಹಿತಿ ಬಯಸುತ್ತಿದ್ದರು. ಆದರೆ, ಸಮಗ್ರವಾದ ವರದಿಗಳೇ ನ್ಯಾಯಾಲಯಗಳಿಗೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಮ್ಮ ಸರ್ಕಾರ ಗಣತಿ ನಡೆಸುವ ಜವಾಬ್ದಾರಿ ವಹಿಸಿತು. ಆಗ  ಹಿರಿಯ ನ್ಯಾಯವಾದಿ ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿದ್ದು. ಆಯೋಗ ಸುಮಾರು 1.88 ಲಕ್ಷ ಸಿಬ್ಬಂದಿಯನ್ನು ಗಣತಿಗೆ ಬಳಸಿಕೊಂಡಿತ್ತು. ಸಿಬ್ಬಂದಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ, 55 ಅಂಶಗಳನ್ನು ಮುಂದಿಟ್ಟುಕೊಂಡು ಮಾಹಿತಿ ಸಂಗ್ರಹಿಸಿದ್ದರು. ಇದರ ಆಧಾರದ ಮೇಲೆ ಆಯೋಗ ಸಮಗ್ರವಾದ ವರದಿಯನ್ನು ಆಯೋಗ ಸಿದ್ಧಪಡಿಸಿದೆ. ದೇಶದಲ್ಲಿ ಎಲ್ಲಿಯೂ ಈ ರೀತಿಯ ವರದಿಯನ್ನು ಸಿದ್ಧಪಡಿಸಿಲ್ಲ. ಇದಕ್ಕಾಗಿ 162.77  ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು.

ಕೇವಲ ಜಾತಿ ಗಣತಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಅಂಕಿ-ಅಂಶ ಇದ್ದರೆ, ಮಾಹಿತಿ ಇದ್ದರೆ ಸಾಮಾಜಿಕ, ಆರ್ಥಿಕವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲು, ಮೀಸಲು ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಮೀಸಲು ಪ್ರಮಾಣ ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಹಿಂದೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರಲಿಲ್ಲ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಎಸ್‍ಸಿಇಪಿ/ಟಿಎಸ್‍ಪಿ ಯೋಜನೆಗೆ ಜಾರಿಗೆ ತರಲಾಯಿತು. ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಕಾಯಿದೆಯನ್ನೂ ರೂಪಿಸಲಾಯಿತು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ. 17.15, ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ. 6.95 ಇದೆ. ಒಟ್ಟು ಶೇ. 24.1ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿದ್ದಾರೆ. ಎಲ್ಲ ಜಾತಿಗಳ ಬಗ್ಗೆ ಮಾಹಿತಿ ಇದ್ದರೆ ಈ ರೀತಿಯ ಕಾರ್ಯಕ್ರಮ ಜಾರಿಗೆ ತರಲು ಅನುಕೂಲವಾಗುತ್ತದೆ.

ಬಡವರಿಗೆ,  ದಲಿತರಿಗೆ, ಶೋಷಿತರಿಗೆ, ಅವಕಾಶ ವಂಚಿತರಿಗೆ ಕೇವಲ ಮತದಾನದ ಹಕ್ಕು ನೀಡಿದರೆ ಸಾಲದು. ಅವರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ಬರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಅಧಿಕಾರದಲ್ಲಿ, ಸಂಪತ್ತಿನಲ್ಲಿ ಪಾಲು ಇರಬೇಕು. ಶಿಕ್ಷಣ ಎಲ್ಲರಂತೆ ಅವರಿಗೂ ಸಿಗಬೇಕು. ಇದು ಆದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೆ ಸಾರ್ಥಕ ಆಗುತ್ತದೆ ಎಂಬುದು ಅಂಬೇಡ್ಕರ್ ಅವರ ನಿಲುವು ಆಗಿತ್ತುಲ್ಲೀಗ ರಾಜಕೀಯ ಅಧಿಕಾರ ಸಿಕ್ಕಿದೆ. ಆದರೆ ಸಾಮಾಜಿಕ, ಆರ್ಥಿಕ ಶಕ್ತಿ ಸಿಕ್ಕಿಲ್ಲ ಎಂಬ ನೋವು ಇದೆ.

ನ್ಯಾಯಾಲಯಗಳು ಮತ್ತು ಸರ್ಕಾರಗಳಿಗೆ ಸುಲಭವಾಗಿ ಮಾಹಿತಿ ಸಿಗುತ್ತದೆ. ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುತ್ತದೆ. ಜೊತೆಗೆ ಅವಕಾಶ ವಂಚಿತರನ್ನು ಮೇಲೆ ಎತ್ತಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಗಣತಿ ಅರಂಭಿಸಿದ್ದು. ನಾನು ಮುಖ್ಯಮಂತ್ರಿ ಆಗಿರುವ ವರೆಗೆ ಆಯೋಗ ವರದಿ ಕೋಡಲಿಲ್ಲ. ಸಿದ್ದರಾಮಯ್ಯ ಇದ್ದಾಗಲೇ ತೆಗೆದುಕೊಳ್ಳಬಹುದಿತ್ತು ಎಂದರು ಕೆಲವರು ಹೇಳುತ್ತಾರೆ.

ನಾನು ಆಯೋಗದಿಂದ ವರದಿಯನ್ನು ಕಿತ್ತುಕೊಳ್ಳಲು ಆಗುವುದೇ ? ನಾನಿದ್ದಾಗ ಆಯೋಗ ಕೊಡಲಿಲ್ಲ. ವರದಿ ಆಗ ಪೂರ್ಣವೂ ಆಗಿರಲಿಲ್ಲ. ಆ ವೇಳೆಗೆ ಚನಾವಣೆ ಬಂದು ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಆಯೋಗ ವರದಿ ಕೊಡಲು ಪ್ರಯತ್ನ ಮಾಡಿತಾದರೂ ಸ್ವೀಕಾರ ಮಾಡಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ವರದಿ ಸ್ವೀಕಾರ ಮಾಡುವುದರಿಲಿ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನೇ ವಜಾ ಮಾಡಿದರು. ಹೀಗಾಗಿ ಕಾಂತರಾಜ್ ಅವರು ಆಯೋಗದ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿದರು.

ಈ ವರೆಗೆ ಪ್ರಯತ್ನ ಮಾಡಿದರೂ ಸರ್ಕಾರ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ. ಯಾವುದೋ ಜಾತಿಯನ್ನು ಗುರಿಯಾಗಿಟ್ಟುಕೊಂಡು ವರದಿ ಸಿದ್ಧಪಡಿಸಿಲ್ಲ. ರಾಜ್ಯದ ಜನಸಂಖ್ಯೆ ಈಗ ಈಗ 6.70 ಕೋಟಿ ಆಗಿರಬಹುದು. ಆಯೋಗ ನೇಮಕ ಮಾಡಿದ ಸಿಬ್ಬಂದಿ ಎರಡು, ಮೂರು ಬಾರಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಗ್ರಾಮೀಣ ಪ್ರದೇ±ದಲ್ಲಿ ಶೇ. 100ಕ್ಕೆ 100ರಷ್ಟು ಸಮೀಕ್ಷೆಯಾಗಿದೆ. ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡಬೇಕಿತ್ತು.

ವರದಿ ಕುರಿತು ನಾನು ಮೌನ ವಹಿಸಿಲ್ಲ. ಈ ಸರ್ಕಾರ ವರದಿ ಸ್ವೀಕಾರ ಮಾಡಬಹುದು ಎಂದು ಕಾಯುತ್ತಿದ್ದೆ. ಆದರೆ, ಸರ್ಕಾರ ತಯಾರಿಲ್ಲ. ರಾಜ್ಯದಲ್ಲಿರುವ ಎಲ್ಲ ಜಾತಿಗಳ ಬಗ್ಗೆಯೂ ಸಮೀಕ್ಷೆ ನಡೆದಿದೆ. ಇಂಥ ವರದಿಯನ್ನು ಸ್ವೀಕಾರ ಮಾಡಿ, ಅದರ ಆಧಾರದ ಮೇಲೆ ಮೀಸಲು ಸೌಲಭ್ಯ ಒದಗಿಸುವ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬಹುದು. ಎಷ್ಟೋ ಕುಟುಂಬಳಿಗೆ ಇನ್ನೂ ಸರ್ಕಾರದ ಸವಲತ್ತು ಸಿಕ್ಕಿಲ್ಲ. ಓದದವವರು, ಜಮೀನು, ಸರ್ಕಾರಿ ಉದ್ಯೋಗ ಇಲ್ಲದ ಕುಟುಂಬಳಿಗೆ ಆದ್ಯತೆ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಹೀಗಾಗಿ ವರದಿಯನ್ನು ಸ್ವೀಕಾರ ಮಾಡುವುದು ಸೂಕ್ತ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಕೆಲವರು ವರದಿ ಕುರಿತು ಊಹಾಪೋಹದ ಮಾತುಗಳನ್ನಾಡುತ್ತಾರೆ.

ಎಸ್ ಟಿ ಮೀಸಲು ಹೆಚ್ಚಳಕ್ಕೆ ವಿರೋಧವಿಲ್ಲ….

ಪರಿಶಿಷ್ಟ ಪಂಗಡದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ವರದಿ ನೀಡಿದ್ದಾರೆ. ಎಸ್ ಟಿ ಸಮುದಾಯವರು ಮೀಸಲು ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ. ನಾಗಮೋಹನ ದಾಸ್ ಅವರ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಆನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಸಂವಿಧಾನವೇ ಹೇಳಿದೆ. ನಾವು ಸಾಮಾಜಿಕ ನ್ಯಾಯದ ಪರ ಎಂದು ಆಡಳಿತ ನಡೆಸುವವರು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಮಂಡಲ್ ಆಯೋಗದ ವರದಿಯನ್ನು ವಿರೋಧ ಮಾಡಿದವರೇ ಈಗ ಅಧಿಕಾರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.Accept- Social- Economic - Educational –Survey- Report- Former CM- Siddaramaiah

ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಒಕ್ಕೂಟದ ಗೌರವ ಅಧ್ಯಕ್ಷರಾದ ಡಾ. ಬಿ.ಕೆ. ರವಿ,  ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಲಾತೂರ್, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Key words: Accept- Social- Economic – Educational –Survey- Report- Former CM- Siddaramaiah