ದೀದಿ ನಾಡಲ್ಲಿ ಮಹಾಮೈತ್ರಿಯ ಗೈರೇ ಬಿಜೆಪಿಗೆ ವರದಾನ

kannada t-shirts

ಕೋಲ್ಕತ: ಮಮತಾ ದೀದಿ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಡೆ ಭಾರೀ ಸದ್ದು ಮಾಡುತ್ತಿದೆ. ಇದುವರೆಗೆ ಮಮತಾ ದೀದಿ ಹೋರಾಟ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಸೀಮಿತವಾಗಿತ್ತು. ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಮೋದಿ-ಷಾ ವಿರುದ್ಧ ನೇರಾ ನೇರ ಸೆಣಸಾಟದ ವಾತಾವರಣ ನಿರ್ವಣವಾಗಿದೆ. ಇಂಥದ್ದೊಂದು ವಾತಾವರಣದ ನಿರ್ವಣಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೊಡುಗೆಯೂ ಇದೆ ಎನ್ನುವುದು ಕುತೂಹಲಕರ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬೇರು ಬೀಡಲು ಅವಕಾಶ ನೀಡಬಾರದೆನ್ನುವುದು ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ ಉದ್ದೇಶವಾಗಿತ್ತು. ಆದರೆ ಟಿಎಂಸಿ-ಕಾಂಗ್ರೆಸ್ ಅಥವಾ ಕಾಂಗ್ರೆಸ್-ಎಡಪಕ್ಷಗಳ ನಡುವೆ ಮೈತ್ರಿ ಸಾಧ್ಯವಾಗಲೇ ಇಲ್ಲ. ರಾಯ್ ಗಂಜ್ ಮತ್ತು ಮುರ್ಷಿದಾಬಾದ್ ಕ್ಷೇತ್ರಗಳ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡಲಿಲ್ಲ ಎಂಬ ಕಾರಣ ಕೊಟ್ಟು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಮಧ್ಯೆ ಮೈತ್ರಿಯಾಗಲಿಲ್ಲ. ಒಂದು ಕಾಲದಲ್ಲಿ ರಾಯ್ ಗಂಜ್ ಕಾಂಗ್ರೆಸ್ ಭದ್ರಕೋಟೆ. ಕಳೆದ ಬಾರಿ ರಾಯ್ ಗಂಜ್ ಸಿಪಿಐ ತೆಕ್ಕೆ ಸೇರಿತ್ತು. ಮುಶಿದಾಬಾದ್ ನಲ್ಲಿ ಕಾಂಗ್ರೆಸ್ ಸಂಸದರಿದ್ದಾರೆ. ಆದರೆ ಎರಡೂ ಪಕ್ಷಗಳು ಈ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದವು. ವಾಸ್ತವದಲ್ಲಿ ಈ ಬಿಕ್ಕಟ್ಟು ಮೈತ್ರಿ ಬೇಡ ಎನ್ನಲು ನೆಪವಾಗಿತ್ತಷ್ಟೇ. ಕಾಂಗ್ರೆಸ್-ಟಿಎಂಸಿ ಜತೆ ಒಳ ಒಪ್ಪಂದ ಮಾಡಿಕೊಂಡಿವೆ ಎಂಬುದು ಸಿಪಿಐ ನಾಯಕರು ಮೊದಲೇ ಅಸಮಾಧಾನಗೊಂಡಿದ್ದರು ಹಾಗೂ ಬಂಗಾಳದ ಮೈತ್ರಿ ಕೇರಳದಲ್ಲಿ ಪರಿಣಾಮ ಬೀರಬಲ್ಲದು ಎಂಬ ಆತಂಕವೂ ಕಾಡಿತ್ತು. ಹಾಗೆಯೇ ಸೀತರಾಂ ಯಚೂರಿ-ಪ್ರಕಾಶ್ ಕಾರಟ್ ನಡುವಿನ ಭಿನ್ನಾಭಿಪ್ರಾಯವೂ ಮೈತ್ರಿ ಆಗದಿರಲು ಕಾರಣವಾಯಿತು. ಅದೇನೆ ಇರಲಿ, ಈ ವೈರುಧ್ಯಗಳು ಇಲ್ಲಿ ಬಿಜೆಪಿಗೆ ನೆರವಾಗಿದೆ ಎನ್ನುವುದು ವಾಸ್ತವ.

ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಹಿಂದಿನ ಅಸ್ತಿತ್ವ ಉಳಿಸಿಕೊಂಡಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವ ಬಂಗಾಳದ ಯುವ ಕಾಂಗ್ರೆಸ್ ಮುಖಂಡರೊಬ್ಬರು, ರಾಜ್ಯಾಧ್ಯಕ್ಷ ಸೊಮೆನ್ ಮಿತ್ರಾ ಟಿಎಂಸಿ ಮುಖಂಡರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಲ್ಲದೆ, ಕೆಲವು ಸೀಟುಗಳಲ್ಲಿ ಟಿಕೆಟ್ ಮಾರಾಟ ಮಾಡಿದರು. ಸ್ಥಳೀಯ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ಸಿಗಲಿಲ್ಲ. ಬಿಜೆಪಿ ಪ್ರಾಬಲ್ಯ ಸಾಧಿಸುತ್ತಿರುವಾಗ ಕನಿಷ್ಠ ಹೋರಾಟ ನೀಡುವ ಪ್ರಯತ್ನವೂ ರಾಷ್ಟ್ರ ಮತ್ತು ರಾಜ್ಯ ನಾಯಕರಿಂದ ನಡೆಯಲಿಲ್ಲ ಎಂದು ಅಸಮಾಧಾನ ತೋಡಿಕೊಂಡರು. ಒಟ್ಟಿನಲ್ಲಿ, ರಾಜ್ಯ ರಾಜಕಾರಣದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತಲುಪಿರುವ ಸಿಪಿಐ ಮತ್ತು ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಇರುವ ಸ್ಥಾನಗಳನ್ನೂ ಕಳೆದುಕೊಳ್ಳಲಿವೆ ಎಂದು ಹೇಳಲಾಗುತ್ತಿದೆ.

ಕುಸಿಯುತ್ತಿರುವ ಕಾಂಗ್ರೆಸ್

2009ರಲ್ಲಿ ಕಾಂಗ್ರೆಸ್ ಇಲ್ಲಿ 6 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ 2014ರಲ್ಲಿ 4ಕ್ಕೆ ಸೀಮಿತಗೊಂಡಿತ್ತು. ಬಹರಾಮ್ ಪುರ್, ಜಂಗೀಪುರ್, ಮಾಲ್ಡ ಉತ್ತರ ಮತ್ತು ಮಾಲ್ಡ ದಕ್ಷಿಣ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದ್ದರೂ, ಕೆಲ ತಿಂಗಳ ಹಿಂದೆ ಮಾಲ್ಡ ಉತ್ತರ ಕ್ಷೇತ್ರದ ಸಂಸದೆ ಮೌಸಮ್ ನೂರ್ ಟಿಎಂಸಿ ಸೇರಿಕೊಂಡು, ಅದೇ ಕ್ಷೇತ್ರದಿಂದ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದ್ದಾರೆ. ನಾವು 4 ಸೀಟುಗಳನ್ನೂ ಗೆಲ್ಲಲಿದ್ದೇವೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದರೂ, ಕಾಂಗ್ರೆಸ್ ಈ ಬಾರಿ ಶೂನ್ಯ ಸಂಪಾದನೆ ಮೂಲಕ ರಾಜ್ಯದಲ್ಲಿ ನಾಮಾವಶೇಷಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಸವಾಲು ಹಾಕುತ್ತಾರೆ. ಕಳೆದ ಬಾರಿ 34 ಸೀಟುಗಳನ್ನು ಬಾಚಿಕೊಂಡಿದ್ದ ಟಿಎಂಸಿಗೆ ಬೇರೆ ಯಾವ ಪಕ್ಷಗಳು ಸರಿಸಾಟಿ ಎನಿಸಿರಲಿಲ್ಲ. ಆದರೆ, ಬಿಜೆಪಿ ಮತ ಗಳಿಕೆ ಪ್ರಮಾಣದ ಏರಿಕೆ ಭವಿಷ್ಯದ ಮುನ್ಸೂಚನೆಯನ್ನು ನೀಡಿತ್ತು. ಆದರೆ ಇದರಿಂದ ಕಾಂಗ್ರೆಸ್ ಎಚ್ಚೆತ್ತುಕೊಂಡಿರಲಿಲ್ಲ. ಎಡಪಕ್ಷಗಳನ್ನು ಇಲ್ಲಿನ ಮತದಾರನೇ ಬಗ್ಗುಬಡಿದ ಬಳಿಕ ಟಿಎಂಸಿಗೆ ಪೈಪೋಟಿ ನೀಡಬಲ್ಲ ಪ್ರಭಾವಿ ನಾಯಕತ್ವ ಬೆಳಸುವ ಯತ್ನವನ್ನೂ ಕಾಂಗ್ರೆಸ್​ನ ರಾಹುಲ್ ಗಾಂಧಿ ಮಾಡಲಿಲ್ಲ. ಅದಲ್ಲದೆ, ರಾಹುಲ್ ನಡೆಸಿದ ಒಂದೆರಡು ರ್ಯಾಲಿಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿದ್ದು ಬಿಟ್ಟರೆ, ಉಳಿದ ಸಂದರ್ಭಗಳಲ್ಲಿ ಸ್ಥಳೀಯ ಕಾಂಗ್ರೆಸ್ ಕೂಡ ಪ್ರಬಲ ಶಕ್ತಿ ಪ್ರದರ್ಶನಕ್ಕೆ ಮುಂದಾಗಲೇ ಇಲ್ಲ. ರಾಹುಲ್ ಗಾಂಧಿ ಕಳೆದ ವರ್ಷ ಹಳೇ ತಲೆಮಾರಿನ ಸೊಮೆನ್ ಮಿತ್ರರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಇಡೀ ಕಾರ್ಯಕರ್ತ ವರ್ಗದ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದರು. ಹೀಗಾಗಿಯೇ ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ದುರ್ಬೀನು ಹಾಕಿ ಹುಡುಕಬೇಕಾಗಿ ಬಂತು.

ಭಾನುವಾರದಂದು ಕೊಲ್ಕತ ಬಿಜೆಪಿ ನಾಯಕರು ತಮ್ಮ ಕೇಂದ್ರ ಕಚೇರಿಯಲ್ಲಿ ಸಭೆ ಗಳನ್ನು ನಡೆಸುತ್ತಿದ್ದರೆ, ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಿಮಗೆ ಯಾರೂ ಸಿಗುವುದಿಲ್ಲ. ಪಕ್ಷದ ಕಚೇರಿ ಬಂದ್ ಆಗಿರುತ್ತದೆ. ಇದು ನಮ್ಮ ಪಕ್ಷದ ಈಗಿನ ಸ್ಥಿತಿ ಎನ್ನುತ್ತಾರೆ.

| ಅನಿಲ್, ಕಾಂಗ್ರೆಸ್ ಕಾರ್ಯಕರ್ತ

ದೆಹಲಿಗೆ ಸೀಮಿತವಾದ ಮೈತ್ರಿ

ಮೋದಿ-ಷಾ ನಾಗಲೋಟಕ್ಕೆ ಕಡಿವಾಣ ಹಾಕಲು ವಿಪಕ್ಷಗಳು ಒಗ್ಗೂಡಬೇಕು ಎಂದು ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ನಂತರ ಮುಖಾಮುಖಿಯಾಗಲೇ ಇಲ್ಲ. ಇಬ್ಬರಿಗೂ ಪ್ರಧಾನಿ ಹುದ್ದೆ ಮೇಲೆ ಕಣ್ಣು. ಪ್ರತಿಪಕ್ಷಗಳ ನಾಯಕತ್ವ ತನಗೇ ಬೇಕು ಎನ್ನುವ ಮಮತಾ, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ರಾಹುಲ್ ನಾಯಕತ್ವಕ್ಕೆ ಶರಣಾಗಿದ್ದ ಕಾಂಗ್ರೆಸ್ಸಿಗರು ದೀದಿಯನ್ನು ಸಮಾಧಾನಪಡಿಸಲು ಮುಂದಾಗಲಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅಭಿಷೇಕ್ ಮನುಸಿಂಘಿಯವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಲು ಟಿಎಂಸಿ ಕಾಂಗ್ರೆಸ್ ಗೆ ಬೆಂಬಲ ನೀಡಿತ್ತು. ಆದರೆ ದೆಹಲಿಯ ಈ ಸ್ನೇಹ ಬಂಗಾಳಕ್ಕೆ ವಿಸ್ತರಣೆಗೊಳ್ಳಲೇ ಇಲ್ಲ. ಏತನ್ಮಧ್ಯೆ, ಟಿಎಂಸಿ ವಿರೋಧಿಸುತ್ತಿದ್ದ ಮತ್ತು ಸಿಪಿಐ-ಕಾಂಗ್ರೆಸ್ ಪರವಿದ್ದ ಮತಗಳೂ ಈ ಬಾರಿ ಬಿಜೆಪಿ ಕಡೆ ವಾಲಿದೆ ಎಂಬ ಮಾತುಗಳು ರಾಜಕೀಯ ಕಾರಿಡಾರ್ ನಲ್ಲಿ ಕೇಳಿಬಂದಿದೆ. ದಿಲ್ಲಿಯಲ್ಲಿ ಗದ್ದುಗೆ ಏರಲು ಕಾಂಗ್ರೆಸ್ ಅಥವಾ ಟಿಎಂಸಿಗೆ ಸಾಧ್ಯವೇ ಇಲ್ಲ ಎನ್ನುತ್ತಿರುವ ಒಂದು ಮತವರ್ಗ ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯ ಇಲ್ಲ ಎಂದೇ ಮೋದಿಗೆ ಮತ ಹಾಕಲು ತೀರ್ವನಿಸಿದೆ ಎಂದು ಬಂಗಾಳಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ.
ಕೃಪೆ:ವಿಜಯವಾಣಿ

ದೀದಿ ನಾಡಲ್ಲಿ ಮಹಾಮೈತ್ರಿಯ ಗೈರೇ ಬಿಜೆಪಿಗೆ ವರದಾನ
absence-of-mahagathbandhan-in-west-bengal-helping-bjp

website developers in mysore