ಶೈಕ್ಷಣಿಕ ವಾತಾವರಣಕ್ಕೆ ವರ್ಗ ಗ್ರಹಣ

0
310

ಬೆಂಗಳೂರು:ಮೇ-13: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಾವಿರಾರು ಶಿಕ್ಷಕರು ಈ ಬಾರಿಯಾದರೂ ವರ್ಗಾವಣೆ ಆಗಬಹುದೆಂದು ಕಾಯುತ್ತಿದ್ದು, ಸರ್ಕಾರದ ಹಂತದಲ್ಲಿ ಇನ್ನೂ ಸ್ಪಷ್ಟ ತೀರ್ಮಾನ ಆಗಿಲ್ಲ. ಇನ್ನೇನು ಶೈಕ್ಷಣಿಕ ವರ್ಷಾರಂಭಕ್ಕೆ 2 ವಾರವೂ ಉಳಿದಿಲ್ಲ.

ಒಂದು ವೇಳೆ ವರ್ಗಾವಣೆ ಅಪೇಕ್ಷಿತರ ಒತ್ತಡಕ್ಕೆ ಸಿಲುಕಿ ಸರ್ಕಾರ ಪ್ರಕ್ರಿಯೆ ಆರಂಭಿಸಿದರೂ ಶೈಕ್ಷಣಿಕ ವರ್ಷದ ಮೊದಲೆರಡು ತಿಂಗಳಲ್ಲಿ ಶೇ.15ಕ್ಕಿಂತ ಹೆಚ್ಚು ಶಿಕ್ಷಕರು ಕಾರ್ಯಸ್ಥಾನ ಬದಲಿಸುವ ವಾತಾವರಣ ನಿರ್ವಣವಾಗಲಿದೆ. ಇದರ ಪರಿಣಾಮ ಶಾಲಾ ಮಕ್ಕಳ ಮೇಲಾಗಲಿದೆ. ರಾಜ್ಯದಲ್ಲಿ ಸುಮಾರು 1.5 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು, 45 ಸಾವಿರ ಪ್ರೌಢಶಾಲಾ ಶಿಕ್ಷಕರಿದ್ದು ಶೇ.25ಕ್ಕಿಂತ ಹೆಚ್ಚು ಮಂದಿ ವರ್ಗಾವಣೆ ಬಯಸಿ 3 ವರ್ಷದಿಂದ ಕಾಯುತ್ತಿದ್ದಾರೆ. 2017ರಿಂದ ಇದುವರೆಗೆ ವರ್ಗಾವಣೆಗಾಗಿ 5 ಬಾರಿ ಪ್ರಕ್ರಿಯೆ ಆರಂಭಿಸಿದ್ದ ಸರ್ಕಾರ, ಬರ-ಚುನಾವಣೆ ಸೇರಿ ವಿವಿಧ ಕಾರಣಕ್ಕೆ ವರ್ಗಾವಣೆಗೆ ಮುಂದಾಗಲಿಲ್ಲ. ಹೀಗಾಗಿ ಈ ಬಾರಿಯಾದರೂ ವರ್ಗಾವಣೆ ಆಗಬಹುದೆಂದು ಸಾವಿರಾರು ಶಿಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ತಡವೇಕೆ?: ಕೆಲವು ಸಣ್ಣಪುಟ್ಟ ವ್ಯತ್ಯಾಸಗಳ ಕಾರಣಕ್ಕೆ ಕಳೆದ ಅಧಿವೇಶನದಲ್ಲಿ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಬಳಿಕ ಹೊಸ ಮಾರ್ಗಸೂಚಿ ರಚನೆಯಾಗಿ ಸರ್ಕಾರದ ಹಂತದಲ್ಲಿ ಒಪ್ಪಿಗೆ ಪಡೆಯಬೇಕು. ಸದ್ಯ ಮಾರ್ಗಸೂಚಿ ಕರಡು ಸಿದ್ಧವಿದ್ದು, ಶಿಕ್ಷಣ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಹಂತದಲ್ಲಿ ಇದಕ್ಕೆ ಒಪ್ಪಿಗೆ ಸಿಗಬೇಕಿದೆ. ಬಳಿಕ ಸಾರ್ವಜನಿಕವಾಗಿ ಪ್ರಕಟಿಸಿ ಆಕ್ಷೇಪಣೆಗೆ ಕಾಲಾವಕಾಶ ಕೊಡಬೇಕಾಗುತ್ತದೆ. ಶಿಕ್ಷಣ ಇಲಾಖೆ ವರ್ಗಾವಣೆ ಕಾಯ್ದೆ ಪ್ರಕಾರ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಬೇಕು. ಒಂದು ವೇಳೆ ಸರ್ಕಾರ ಈಗ ಒಪ್ಪಿದರೂ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆ ಎಂದು ಜೂನ್- ಜುಲೈನಲ್ಲಿ ಓಡಾಡಿದರೆ ಪಾಠ ಪ್ರವಚನದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಮತ್ತೆ ರಾಜಕೀಯ ಹಸ್ತಕ್ಷೇಪದ ಕಳವಳ

ಶಿಕ್ಷಣ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಆಗುವುದು ಕಡ್ಡಾಯ. ಆದರೆ, ಹೊಸ ನಿಯಮದಂತೆ ಕೌನ್ಸೆಲಿಂಗ್ ನಂತರ ಉಳಿಯುವ ಖಾಲಿ ಹುದ್ದೆಗಳಿಗೆ ವಿವೇಚನಾ ವರ್ಗಾವಣೆಗೆ ಅವಕಾಶವಿದೆ. ಇದರ ಅಡ್ಡ ಪರಿಣಾಮಗಳ ಬಗ್ಗೆ ಇಲಾಖೆಯಲ್ಲಿ ಒಂದಷ್ಟು ಚರ್ಚೆಯಾಗಿದೆ. ಕೌನ್ಸೆಲಿಂಗ್ ಪದ್ಧತಿ ಜಾರಿಗೆ ಬರುವ ಮುನ್ನ ಶಿಕ್ಷಕರ ವರ್ಗಾವಣೆಯಲ್ಲಿದ್ದ ರಾಜಕೀಯ ಮತ್ತು ಅಧಿಕಾರಿಗಳ ಹಸ್ತಕ್ಷೇಪ ಹೊಸ ತೀರ್ವನದಿಂದ ಮರುಕಳಿಸಬಹುದೆಂಬ ಆತಂಕವೂ ಇದೆ.

3 ಸಲ ಅಧಿಸೂಚನೆ, 5 ಬಾರಿ ಮುಂದೂಡಿಕೆ

2016-17ರಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ಆದರೆ, ಅನೇಕ ವಿರೋಧ ಕಂಡುಬಂದಿದ್ದರಿಂದ ಅನೇಕರ ವರ್ಗವಾಗಿಲ್ಲ. ಬಳಿಕ 2017-18, 18-19ರಲ್ಲಿ 3 ಬಾರಿ ಅಧಿಸೂಚನೆ ಹೊರಡಿಸಿದ್ದು, ಐದು ಬಾರಿ ವರ್ಗಾವಣೆ ದಿನಾಂಕ ಮುಂದೂಡಲಾಗಿದೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಇಲಾಖೆಗೆ ಜವಾಬ್ದಾರಿ ನೀಡಿದರೆ ಸಣ್ಣಪುಟ್ಟ ಸಮಸ್ಯೆ ಪರಿಹರಿಸಿಕೊಂಡು ಖಂಡಿತ ವರ್ಗಾವಣೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

ಮುಖ್ಯಮಂತ್ರಿ ಹಂತದಲ್ಲಿ ಆಗಬೇಕಾದ ತೀರ್ಮಾನ

# 2016ರಲ್ಲಿ ವರ್ಗಾವಣೆ ಆಗಿ ರಿಲೀವ್ ಆಗದೇ ಇರುವ ಪ್ರಕರಣಗಳ ಬಗ್ಗೆ ಸಿಎಂ ಹಂತದಲ್ಲಿ ನಿರ್ಣಯಿಸಬೇಕು.

# ಡ್ರಾಫ್ಟ್ ರೂಲ್ ಬಗ್ಗೆ ಒಪ್ಪಿಗೆ ಪಡೆದು ವೇಳಾಪಟ್ಟಿ ನಿರ್ಧರಿಸಬೇಕು.

# ಶೈಕ್ಷಣಿಕ ವರ್ಷ ಆರಂಭವಾಗುವ ಹಂತದಲ್ಲೂ ಪ್ರಕ್ರಿಯೆ ಶುರು ಆಗದ್ದರಿಂದ ಮುಂದೇನು ಎಂಬ ಬಗ್ಗೆ ಸ್ಪಷ್ಟತೆ ಮೂಡಬೇಕು.

ಬಾಕಿ ಉಳಿದ ಗೊಂದಲ

# ವಿದ್ಯಾರ್ಥಿ ಶಿಕ್ಷಕರ ಅನುಪಾತದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಬೇಕು. ಹೀಗೆ ಅನುಪಾತ ನಿಗದಿ ಮಾಡುವಲ್ಲಿ ಆರ್​ಟಿಇ ಪ್ರಕಾರವೋ ಕಾಯ್ದೆ ಪ್ರಕಾರವೋ ಎಂಬ ಗೊಂದಲಗಳಿವೆ.

# ಎ-ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದವರನ್ನು ಸಿ- ವಲಯಕ್ಕೆ ವರ್ಗಾಯಿಸಲು ಸಾಕಷ್ಟು ವಿರೋಧವಿದೆ.
ಕೃಪೆ:ವಿಜಯವಾಣಿ

ಶೈಕ್ಷಣಿಕ ವಾತಾವರಣಕ್ಕೆ ವರ್ಗ ಗ್ರಹಣ
teachers-of-the-state-primary-and-high-school-transfer-has-not-been-decided-at-the-government-level