ಕೆ ಸಿ ಜನರಲ್ ಆಸ್ಪತ್ರೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅಪಘಾತ & ತುರ್ತು ಚಿಕಿತ್ಸಾ ಘಟಕಕ್ಕೆ ಸಚಿವ ಅಶ್ವತ್ ನಾರಾಯಣ್ ಶಂಕುಸ್ಥಾಪನೆ.

Promotion

ಬೆಂಗಳೂರು,ಮಾರ್ಚ್,25,2023(www.justkannada.in):  ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 50 ಹಾಸಿಗೆಗಳ ‘ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ’ಕ್ಕೆ (ಟ್ರಾಮಾ ಕೇರ್ ಸೆಂಟರ್) ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನಗರದ ಉತ್ತರ ಭಾಗದ ಮಲ್ಲೇಶ್ವರ, ರಾಜಾಜಿನಗರ, ಮಾಗಡಿ ರಸ್ತೆ, ಪೀಣ್ಯ, ನೆಲಮಂಗಲ ಭಾಗಗಳ ಕಡೆಯಿಂದ ಚಿಕಿತ್ಸೆಗಾಗಿ ಬರುವವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದರು.

ಮುಖ್ಯವಾಗಿ, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಅಪಘಾತಗಳಿಂದ ತೊಂದರೆಗೆ ಒಳಗಾಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಈ ಭಾಗದವರು ಇಂತಹ ಸನ್ನಿವೇಶದಲ್ಲಿ ನಿಮ್ಹಾನ್ಸ್ ಅಥವಾ ಸಂಜಯ್ ಗಾಂಧಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಇಲ್ಲಿ ಟ್ರಾಮಾ ಘಟಕ ನಿರ್ಮಾಣವಾಗುವುದರಿಂದ ಆ ಸಮಸ್ಯೆ ಇಲ್ಲವಾಗುತ್ತದೆ ಎಂದು ವಿವರಿಸಿದರು.

ಕೆಸಿ ಜನರಲ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿಯನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದಾಗಿಯೂ ತಿಳಿಸಿದರು.

ಯಶವಂತಪುರದಲ್ಲಿ ಒಂದು, ಗೋವಿಂದರಾಜನಗರದಲ್ಲಿ ಎರಡು ಹಾಗೂ ಮಹದೇವಪುರದಲ್ಲಿ ಒಂದು ಸರ್ಕಾರಿ ಹೈಟೆಕ್ ಆಸ್ಪತ್ರೆಗಳು ಇತ್ತೀಚೆಗೆ ನಿರ್ಮಾಣಗೊಂಡಿವೆ. ಕೋವಿಡ್ ನಂತರ ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯ ಸುಮಾರು 2000ದಷ್ಟು ಹೆಚ್ಚಾಗಿದೆ. ಆದರೆ, ಸಂಖ್ಯೆಗೆ ಅನುಗುಣವಾಗಿ ಸೇವಾ ಗುಣಮಟ್ಟವೂ ಹೆಚ್ಚಾಗಬೇಕು. ಜನರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಾಗಬೇಕು ಎಂದು ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

ಸಂಸದ ಪಿ ಸಿ ಮೋಹನ್, ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿದರು. ವೈದ್ಯಕೀಯ ಅಧೀಕ್ಷಕಿ ಡಾ. ಇಂದಿರಾ ಆರ್ ಕಬಾಡೆ ಸ್ವಾಗತಿಸಿದರು.

Key  words: 35 crores -KC General Hospital- Trauma Care Center -Minister -Ashwath Narayan