ಈ ವರ್ಷ 1500 ಮಾದರಿ ಶಾಲೆಗಳ ಸ್ಥಾಪನೆ ಮಾಡಲಾಗುವುದು- ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಬೆಂಗಳೂರು, ಜುಲೈ 14, 2022 (www.justkannada.in): “ರಾಜ್ಯ ಸರ್ಕಾರ ಈ ವರ್ಷ 1500 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಿದೆ,” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, “ಈ ಮಾದರಿ ಶಾಲೆಗಳು ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ನೀಡಲಿದ್ದು, ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನೂ ಒದಗಿಸಲಿದೆ. ಅತ್ಯುತ್ಕೃಷ್ಟ ಮೂಲಭೂತಸೌಕರ್ಯಗಳನ್ನು ಒಳಗೊಂಡಿರುತ್ತವೆ,” ಎಂದು ವಿವರಿಸಿದರು.

“ಪರಿವರ್ತಿಸಲಾಗುವ ಶಾಲೆಗಳನ್ನು ನಾವು ಆಯ್ಕೆ ಮಾಡುತ್ತೇವೆ. ಈ ಶೈಕ್ಷಣಿಕ ವರ್ಷದಿಂದಲೇ ಬದಲಾವಣೆಗಳನ್ನು ಅನುಷ್ಠಾನಗೊಳಿಸಲಾಗುವುದು,” ಎಂದರು.

“ಶೇ.೯೨ರಷ್ಟು ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಸರ್ಕಾರ ಬಹಳ ಕಡಿಮೆ ಅವಧಿಯಲ್ಲಿ ಒಂದು ಮೈಲಿಗಲನ್ನು ಸಾಧಿಸಿದೆ ಎಂದರು. “ನಮ್ಮ ಸರ್ಕಾರ ಪಠ್ಯಪುಸ್ತಕದಲ್ಲಿ ರಾಷ್ಟ್ರೀಯತೆಯನ್ನು ಸೇರಿಸುವ ಆಕಾಂಕ್ಷೆಯನ್ನು ಹೊಂದಿತ್ತು. ಇದರಿಂದಾಗಿ ಕೆಲವರಿಗೆ ಕೋಪ ಬಂತು. ಮಕ್ಕಳು ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮೆ ಪಡುವಂತಹ ಪಠ್ಯವನ್ನು ವಿರೋಧಿಸಲಾಗುತ್ತಿದೆ. ಆ ವಿರೋಧಿಗಳಿಗೆ ಈ ಕ್ರಮವನ್ನು ವಿರೋಧಿಸುವುದು ಸಾಧ್ಯವಾಗಲಿಲ್ಲ, ಆದ್ದರಿಂದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಗುರಿಯಾಗಿಸಿದರು,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಠ್ಯಪುಸ್ತಕ ಪರಿಷ್ಕರಣೆಯ ವಿಷಯವನ್ನು ರಾಜಕೀಯಗೊಳಿಸಿದ್ದು ತಪ್ಪು ಎಂದ  ಸಚಿವ ಬಿಸಿ ನಾಗೇಶ್, “ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ, ಬಿಜೆಪಿ ಸಹ ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿತ್ತು. ಆದರೆ ಅದು ವ್ಯವಸ್ಥೆಯ ಚೌಕಟ್ಟಿನೊಳಗಿತ್ತು. ಈ ರೀತಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಲಿಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕದ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (ರುಪ್ಸಾ) ವತಿಯಿಂದ, ಸಚಿವ ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದ ಕುರಿತು ಉತ್ತರಿಸಿದ ಸಚಿವ ಬಿ.ಸಿ. ನಾಗೇಶ್ ಅವರು, “ಮೋದಿಯವರಿಗೆ ವಾಸ್ತವ ಅರ್ಥವಾಗುತ್ತದೆ. ಅವರು ಸರಿಯಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ. ಕಳೆದ ವರ್ಷ ಕೋವಿಡ್-೧೯ ಇದ್ದ ಕಾರಣದಿಂದಾಗಿ ೧೦ನೇ ತರಗತಿ ಸುಲಭವಾಗಿತ್ತು. ಆದರೆ ಈ ವರ್ಷ ಕಠಿಣವಾಗಿರುತ್ತದೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 1500 model-schools – this year-Education Minister-B.C. Nagesh