ಸಂತೋಷ್‌ಗೆ ಪ್ರಧಾನ ಹೊಣೆ: ಸಂಘಟನೆ ಜವಾಬ್ದಾರಿ ನೀಡಿದ ಶಾ

ಬೆಂಗಳೂರು:ಜುಲೈ-15: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನಂತರ ಪಕ್ಷದಲ್ಲಿ ಎರಡನೇ ಅತಿ ಉನ್ನತ ಸ್ಥಾನವೆಂದೇ ಗುರುತಿಸಲ್ಪಡುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆಯ ಬಿ.ಎಲ್.ಸಂತೋಷ್‌ ಅವರು ನೇಮಕವಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂತೋಷ್‌ ಅವರನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭಾನುವಾರ ಆದೇಶ ಹೊರಡಿಸಿದ್ದು, ತಕ್ಷಣವೇ ಜಾರಿಯಾಗಲಿದೆ. ಸಂತೋಷ್‌ ಅವರು ಪಕ್ಷದ ಈ ಉನ್ನತ ಹುದ್ದೆಗೆ ಏರಿದ ಪ್ರಥಮ ಕನ್ನಡಿಗರೆನಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಸುದೀರ್ಘ‌ ಕಾಲ ಕಾರ್ಯ ನಿರ್ವಹಿಸಿದ್ದ ರಾಮಲಾಲ್ ಅವರು ಆರ್‌ಎಸ್‌ಎಸ್‌ಗೆ ಮರಳಲು ಶನಿವಾರದ ಸಭೆಯಲ್ಲಿ ಸಂಘಟನೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸಂತೋಷ್‌ ಅವರನ್ನು ನೇಮಿಸಲಾಗಿದೆ.

ಸಂತೋಷ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಹಿಂದಿನ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಸೇರಿದಂತೆ ರಾಜ್ಯ ಮತ್ತು ದೇಶದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಸಂಘಟನಾ ಚತುರ: ಉಡುಪಿ ಜಿಲ್ಲೆಯವರಾದ ಬಿ.ಎಲ್.ಸಂತೋಷ್‌ ಅವರು ದಾವಣಗೆರೆಯ ಸರ್ಕಾರಿ ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ (ಇನ್‌ಸ್ಟ್ರೆಮೆಂಟೇಷನ್‌ ಟೆಕ್ನಾಲಜಿ) ಪದವಿ ಪಡೆದಿದ್ದಾರೆ. ಎರಡೂವರೆ ವರ್ಷಗಳ ಕಾಲ ಟೆಲಿ ಕಮ್ಯುನಿಕೇಷನ್ಸ್‌ ಸಂಸ್ಥೆಯೊಂದರಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿ ಅವರು ಕಾರ್ಯ ನಿರ್ವಹಿಸಿದ್ದರು.

ಆರ್‌ಎಸ್‌ಎಸ್‌ನಲ್ಲಿ ನಿರ್ವಹಿಸಿರುವ ಜವಾಬ್ದಾರಿ ಬಗ್ಗೆ ಹೇಳುವುದಾದರೆ ಬೆಂಗಳೂರಿನಲ್ಲಿ ನಗರ ಕಾರ್ಯವಾಹರಾಗಿ ಕಾರ್ಯ ನಿರ್ವಹಿಸಿದ್ದಾರೆ. 1993ರ ಜೂನ್‌ನಲ್ಲಿ ಪ್ರಚಾರಕ್‌ ಆಗಿ ಕಾರ್ಯ ಆರಂಭಿಸಿದರು. ಮೈಸೂರು ನಗರದಲ್ಲಿ ಒಂದು ವರ್ಷ ಮಂಡಲ ಪ್ರಚಾರಕ್‌, ಮೈಸೂರಿನಲ್ಲಿ ಮೂರು ವರ್ಷ ಜಿಲ್ಲಾ ಪ್ರಚಾರಕ್‌, ಶಿವಮೊಗ್ಗದಲ್ಲಿ ಎರಡು ವರ್ಷ ಜಿಲ್ಲಾ ಪ್ರಚಾರಕ್‌, ಬೆಂಗಳೂರಿನಲ್ಲಿ ಮೂರೂವರೆ ವರ್ಷ ಸಹ ವಿಭಾಗ ಪ್ರಚಾರಕ್‌ ಹಾಗೂ ಶಿವಮೊಗ್ಗದಲ್ಲಿ ನಾಲ್ಕೂವರೆ ವರ್ಷಗಳ ಕಾಲ ವಿಭಾಗ ಪ್ರಚಾರಕ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಪಕ್ಷದಲ್ಲಿ 2006ರಿಂದ ಎಂಟು ವರ್ಷಗಳ ಕಾಲ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

2014ರಿಂದ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಕ್ಷಿಣ ಭಾರತ ರಾಜ್ಯಗಳಲ್ಲಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಜಲ ಹಾಗೂ ಘನ ತ್ಯಾಜ್ಯ ನಿರ್ವಹಣೆ, ಆಂತರಿಕ ಹಾಗೂ ಬಾಹ್ಯ ಭದ್ರತಾ ದೃಷ್ಟಿಕೋನ, ಸಾಮಾಜಿಕ ಪುನಾರಚನಾ ಆಂದೋಲನಗಳು, ಪುರಾತನ ಹಾಗೂ ಆಧುನಿಕ ಜಗತ್ತಿಗೆ ಭಾರತದ ಕೊಡುಗೆ ಕುರಿತು ಅಧ್ಯಯನ ನಡೆಸಿದ್ದಾರೆ. ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತುಳು ಭಾಷೆ ಬಲ್ಲ ಸಂತೋಷ್‌ ಅವರು ಉತ್ತಮ ವಾಗ್ಮಿಗಳೂ ಆಗಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಅಗಾಧ ಅನುಭವವಿರುವ ಸಂತೋಷ್‌ ಅವರು ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇದೆ. ರಾಷ್ಟ್ರೀಯತೆಯ ಸಿದ್ಧಾಂತದ ಕಟು ಪ್ರತಿಪಾದಕರಾಗಿರುವ ಅವರು ಆಧುನಿಕ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆ ಹಾಗೂ ಯುವಜನತೆಯನ್ನು ಸೆಳೆದು ಸಂಘಟಿಸುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಕೃಪೆ:ಉದಯವಾಣಿ
santosh-is-the-main-responsibility