ಮಹಿಳೆಯರಲ್ಲಿ ಅಸಾಧಾರಣ ಅಂತಃಶಕ್ತಿ ಮಡುಗಟ್ಟಿದೆ.-ಡಾ . ವಿಜಯಲಕ್ಷ್ಮಿ ಮನಾಪುರ.

Promotion

ಮೈಸೂರು,ಡಿಸೆಂಬರ್,22,2022(www.justkannada.in): ಬಹುಸಂಸ್ಕೃತಿಯ ಬೀಡಾದ ಭಾರತದಲ್ಲಿ  ಒಲೆ, ಹೊಲಗಳ ನಂಟಿನೊಂದಿಗೆ  ಬದುಕಿನ ಬಂಡಿಯನ್ನು ಯಶಸ್ವಿಯಾಗಿ ಕೊಂಡೊಯ್ಯುತ್ತಿರುವ ಗ್ರಾಮೀಣ ಮಹಿಳೆಯಾಗಲಿ, ಒಳದುಡಿಮೆ- ಹೊರ ದುಡಿಮೆಯಂತಹ ಒತ್ತಡ ದಲ್ಲಿ ಸಿಲುಕಿಯೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ನಗರ ಪ್ರದೇಶದ ಉದ್ಯೋಗಸ್ಥ ಮಹಿಳೆಯಾಗಲಿ ಇವರ ಅಂತರಂಗದಲ್ಲಿ ಅಗಾಧವಾದ ಅಸಾಧಾರಣ ಅಂತಃಶಕ್ತಿ ಮಡುಗಟ್ಟಿದೆ.. ಎಂದು ಮೈಸೂರು ವಿಶ್ವವಿದ್ಯಾ ನಿಲಯದ, ಮಹಾರಾಜ ಕಾಲೇಜು, ಜಾನಪದ ವಿಭಾಗದ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮಿ ಮನಾಪುರ ಹೇಳಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ  ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿನಿಯರ ಸಂಮ್ಮಿಲನ..2022  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅನಾದಿಕಾಲದಿಂದಲೂ ನಮ್ಮ ನೆಲದಲ್ಲಿ  ಸ್ತ್ರೀವಿರೋಧಿ ನೀತಿಗಳು ಹೆಣ್ಣಿನ ಘನತೆ, ಅಸ್ತಿತ್ವಕ್ಕೆ ಆಪತ್ತು ತಂದೊಡ್ಡಿವೆ. ಪ್ರಸ್ತುತದಲ್ಲಿ ಉದಾರೀಕರಣ, ಜಾಗತೀಕರಣದ  ಕಬಂಧ ಬಾಹುಗಳಿಂದ ಮಹಿಳೆಯರ‌ ಸಂಕೋಲೆಗಳು ಮತ್ತಷ್ಟು ಬಿಗಿಯಾಗಿ ಅವಳನ್ನು ದುರವಸ್ಥೆಗೆ ತಳ್ಳುತ್ತಿವೆ ..ಇಷ್ಟೆಲ್ಲಾ ಪ್ರತಿಕೂಲ ಪರಿಣಾಮ, ದೌರ್ಜನ್ಯಗಳ ನಡುವೆಯೂ  ಮಹಿಳೆ‌ ಕುಗ್ಗದೆ ,ಜಗ್ಗದೆ ತನ್ನ ಕ್ರಿಯಾಶೀಲ ಕಾರ್ಯಚಟುವಟಿಕೆ, ದಿಟ್ಟ ಮನೋಭಾವ, ಸ್ವ- ಸಾಮರ್ಥ್ಯದ ಮೂಲಕ ತನ್ನನ್ನು ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ವಿಸ್ತರಿಸಿಕೊಂಡು “ತನ್ನ ವಿಮೋಚನೆ ತನ್ನಿಂದಲೇ” ಎಂದು ಮನಗಂಡು ಮುನ್ನುಗ್ಗುತ್ತಿರುವ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ…ಅದರಲ್ಲೂ ಪ್ರಸ್ತುತದ ‘ ಮೋಹಕ ಜಗತ್ತು’  ಹದಿಹರೆಯದ ಹೆಣ್ಣು ಮಕ್ಕಳಿಗೆ ಸವಾಲಾಗಿ ಪರಿಣಮಿಸಿದೆ. ಇಂತಹ ಸಮಕಾಲೀನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಭಾರತ ಸಂವಿಧಾನ  ದೊರಕಿಸಿಕೊಟ್ಟಿರುವ  ಮಹಿಳಾ ಹಕ್ಕುಗಳ ಬಗೆಗೆ  ಅರಿವು ಮೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಏಕೆಂದರೆ ಸನಾತನ ಸಾಮಾಜಿಕ ವ್ಯವಸ್ಥೆ  ಮಹಿಳೆಗೆ “ಅಕ್ಷರ ಬೇಡ, ಅರಿವು ಬೇಡ, ಆಸ್ತಿ ಬೇಡ, ಅಧಿಕಾರ ಬೇಡ, ಹಕ್ಕುಗಳು ಬೇಡ, ಎಂದು ಎಲ್ಲವನ್ನೂ ನಿರಾಕರಿಸಿತ್ತು..ಆದರೆ ಇವೆಲ್ಲಾ ಬೇಡಗಳನ್ನು ಅಳಿಸಿಹಾಕಿ . ಎಲ್ಲವೂ ಇದೆ ಎಂದು ಮಹಿಳೆಗೆ ಘನತೆ, ಗೌರವಗಳನ್ನು ತಂದುಕೊಟ್ಟದ್ದು  ಭಾರತದ ಸಂವಿಧಾನ.ಈ ಸಂವಿಧಾನವೇ ಮಹಿಳೆಯರ ವಿಮೋಚನೆಗೆ ಮೂಲ ಮಂತ್ರ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ  ಪ್ರಾಂಶುಪಾಲರಾದ ಪ್ರೊ.ಶ್ರೀನಿವಾಸ, ಪ್ರೊ.ಸಿ.ಬಿ.ರಾಜೇಶ್ವರಿ, ಡಾ.ಬಿ.ಪಿ.ಅಶ್ವಿನಿ ಹಾಗೂ ಹಿರಿಯ ವಿದ್ಯಾರ್ಥಿನಿಯರ ಸಂಘದ ಪದಾಧಿಕಾರಿಗಳು, ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು…ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.

Key words: Women –extraordinary- inner -strength.-Dr. Vijayalakshmi Manapura.