ಪುತ್ತೂರಿನ ಈ ಸಣ್ಣ ಪುಸ್ತಕದ ಅಂಗಡಿ ಶಿಕ್ಷಣ ಪಡೆಯಲು ಅಶಕ್ತವಾಗಿರುವಂತಹ ಬಡ ವಿದ್ಯಾರ್ಥಿಗಳ ಆಶಾಕಿರಣ

Promotion

ಮಂಗಳೂರು, ಡಿಸೆಂಬರ್ 7, 2021 (www.justkannada.in): ಪುತ್ತೂರಿನ ಕೋರ್‌ನಡ್ಕದಲ್ಲಿರುವ ಮಂಗಳೂರು ಹೆಂಚಿನ ಪುಸ್ತಕಗಳು ಹಾಗು ಪೆನ್ನುಗಳನ್ನು ಮಾರಾಟ ಮಾಡುತ್ತಿರುವ ಒಂದು ಸಣ್ಣ ಸ್ಟೇಷನರಿ ಅಂಗಡಿ, ಓದಲು ಆಸಕ್ತಿಯಿದ್ದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಶಿಕ್ಷಣವನ್ನು ಮುಂದುವರೆಸಲಾಗದಿರುವಂತಹ ಹಲವಾರು ಬಡ ವಿದ್ಯಾರ್ಥಿಗಳಿಗೆ ದೊಡ್ಡ ಆಶಾಕಿರಣವಾಗಿ ರೂಪುಗೊಂಡಿದೆ.

ಈ ಅಂಗಡಿಯ ಹೆಸರು ಮಾಧವ್ ಎಂಟರ್‌ಪ್ರೈಸಸ್. ೫೦ ವರ್ಷ ವಯಸ್ಸಿನ ಜಿ. ಮಾಧವ್ ಪ್ರಭು ಈ ಅಂಗಡಿಯ ಮಾಲೀಕರು. ಇವರ ಸಹಾಯವಿಲ್ಲದಿದ್ದರೆ ಶಿಕ್ಷಣ ಪಡೆಯಲು ಆಸಕ್ತಿಯಿದ್ದು, ಹಣಕಾಸಿನ ಮುಗ್ಗಟ್ಟಿನಿಂದಾಗಿ ಓದಲು ಸಾಧ್ಯವಾಗದೇ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲಾಗದೆ ನೂರಾರು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು ಎನ್ನುತ್ತದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವಂತಹ ಒಂದು ವೀಡಿಯೊ. ಕೆಲವು ದಿನಗಳ ಹಿಂದೆ ಈ ವೀಡಿಯೊಗೆ ೪೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ‘ಲೈಕ್’ಗಳು ಬಂದಿದ್ದು, ಅನೇಕ ಅಭಿಮಾನಿಗಳನ್ನು ಹುಟ್ಟುಹಾಕಿದೆ.

ಮಾಧವ್ ಅವರು ಬಾಲ್ಯದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿಯಬೇಕಾಯಿತು. ಆರಂಭದಲ್ಲಿ ಅವರು ತಮ್ಮ ತಂದೆ ನಡೆಸುತ್ತಿದ್ದಂತಹ ಒಂದು ಕಿರಾಣಿ ಅಂಗಡಿಯಲ್ಲಿ ಅವರಿಗೆ ಸಹಾಯ ಮಾಡಲಾರಂಭಿಸಿದರು. ಇಪ್ಪತ್ತು ವರ್ಷಗಳ ಹಿಂದೆ ಕೂರ್‌ನಡ್ಕದ ಮಸೀದಿಯ ಬಳಿ ಒಂದು ಸ್ಟೇಷನರಿ ಅಂಗಡಿಯನ್ನು ಆರಂಭಿಸಿದರು.

ಕಳೆದ ೧೫ ವರ್ಷಗಳ ಅವರ ಪಯಣವನ್ನು ಮೆಲುಕು ಹಾಕುತ್ತಾ ಮಾಧವ್ ಅವರು ಹೀಗೆಂದರು: “೨೦೦೫ರಲ್ಲಿ ಏಳನೇ ತರಗತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಒಂದು ವಿದ್ಯಾರ್ಥಿಗಳ ಗುಂಪು ನನ್ನ ಅಂಗಡಿಯ ಮುಂದೆ ಬಂತು ನಿಂತಿತು. ಅವರೆಲ್ಲರೂ ಸೇರಿ ನನ್ನ ಅಂಗಡಿಯ ಮೆಟ್ಟಿಲುಗಳ ಮೇಲೆ ಸಪ್ಪಗೆ ಕುಳಿತಿದ್ದಂತಹ ಒಂದು ಹುಡುಗನನ್ನ ಗೇಲಿ ಮಾಡುತ್ತಿದ್ದರು. ನಾನು ಆ ಬಾಲಕನನ್ನು ಮಾತನಾಡಿಸಿ ಏಕೆ ಸಪ್ಪಗಿರುವೆ ಎಂದು ಕೇಳಿದೆ. ಬಹಳ ಮನವೊಲಿಕೆಯ ನಂತರ ಆತ, ತನ್ನ ತರಗತಿಯಲ್ಲಿ ಟಾಪ್ಪರ್ ಆಗಿದ್ದರೂ ಸಹ ಇತರರಂತೆ ಶಿಕ್ಷಣವನ್ನು ಮುಂದುವರೆಸಲಾಗುತ್ತಿಲ್ಲ ಎಂದು ಉತ್ತರಿಸಿದ. ಆತನ ತಾಯಿ ಮನೆ ಕೆಲಸಕ್ಕೆ ಹೋಗುತ್ತಿದ್ದು, ದೈನಂದಿನ ಊಟಕ್ಕೂ ತೊಂದರೆ ಇದೆ ಎಂದು ತಿಳಿಸಿದ.”

ಆಗ ಮಾಧವ್ ಅವರು ಆ ಬಾಲಕನಿಗೆ ಧೈರ್ಯ ತುಂಬಿ ಆತನಿಗೆ ಉಚಿತವಾಗಿ ನೋಟ್ ಪುಸ್ತಕಗಳು, ಪಠ್ಯಪುಸ್ತಕಗಳು, ಪೆನ್ನುಗಳು, ಪಠ್ಯಪುಸ್ತಕಗಳ ಜೆರಾಕ್ಸ್ ಪ್ರತಿಗಳನ್ನು ನೀಡಿ, ಜೊತೆಗೆ ಆತ ಪದವಿಪೂರ್ವ ಶಿಕ್ಷಣವನ್ನು ಪೂರೈಸುವವರೆಗೂ ಆತನಿಗೆ ತಮ್ಮ ಮನೆಯಲ್ಲೇ ಪಾಠವನ್ನೂ ಹೇಳಿಕೊಟ್ಟರಂತೆ.

ಬಾಸಿತ್ ಎಂಬ ಹೆಸರಿನ ಆ ಬಾಲಕ ಪ್ರಸ್ತುತ ಪುತ್ತೂರಿನಲ್ಲಿರುವ ರಿಲೈಯನ್ಸ್ ರೀಟೆಲ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದು, “ಮಾಧವ್ ಅವರು ವಿದ್ಯಾರ್ಥಿಗಳು ತಮ್ಮ ಬಳಿಗೆ ನೆರವು ಕೇಳಲು ಬರುವವರೆಗೂ ಕಾಯುವುದಿಲ್ಲ. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿಯಿರುವಂತಹ ಯಾವುದೇ ಓರ್ವ ಬಡ ವಿದ್ಯಾರ್ಥಿ ಹಣಕಾಸಿನ ಮುಗ್ಗಟ್ಟಿನಿಂದಾಗಿ ಓದುವುದು ಸಾಧ್ಯವಿಲ್ಲ ಎಂಬ ವಿಚಾರ ತಿಳಿದರೇ ಸಾಕು ಮಾಧವ್ ಅವರು ಆ ವಿದ್ಯಾರ್ಥಿಯ ಅಂಕಪಟ್ಟಿ ಮತ್ತು ಬ್ಯಾಂಕ್ ಪಾಸ್‌ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಂಗ್ರಹಿಸಿ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಬಯಸುವ ದಾನಿಗಳಿಗೆ ರವಾನಿಸುತ್ತಾರೆ. ಆ ಮೂಲಕ ಯಾವುದೇ ಮಧ್ಯಸ್ಥಿಕೆದಾರರಿಲ್ಲದೇ ಹಣವನ್ನು ಸಂಗ್ರಹಿಸಿ ಆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಜಮಾ ಮಾಡುತ್ತಾರೆ,” ಎಂದು ತಿಳಿಸಿದರು.

ಮಾಧವ್ ಅವರ ನೆರವಿನೊಂದಿಗೆ ಶಿಕ್ಷಣವನ್ನು ಪೂರ್ಣಗೊಳಿಸಿರುವ ಬಾಸಿತ್, ಮಾಧವ್ ಅವರಿಗೆ ತಾವು ಈವರೆಗೆ ಎಷ್ಟು ವಿದ್ಯಾರ್ಥಿಗಳಿಗೆ ಈ ರೀತಿ ಸಹಾಯ ಮಾಡಿದ್ದಾರೆ ಎಂಬ ಲೆಕ್ಕವೇ ಗೊತ್ತಿಲ್ಲ. “ಆತ ನಿಸ್ವಾರ್ಥವಾಗಿ ಈ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರು ಕೇವಲ ಇತರರಿಗೆ ಸಹಾಯ ಮಾಡಲು ಇಚ್ಛೆ ಇರುವವರಿಂದ ಮಾತ್ರವೇ ಸಹಾಯವನ್ನು ಕೇಳುತ್ತಾರೆ,” ಎಂದು ಉತ್ತರಿಸಿದರು. ಈ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆದ ನಂತರ ಅನೇಕ ಅಭಿಮಾನಿಗಳು ಅವರ ಅಂಗಡಿಯ ಬಳಿ ಬಂದು ಹಳೆಯ ಪುಸ್ತಕಗಳನ್ನು ಕೊಟ್ಟು ಹೋಗಲಾರಂಭಿಸಿದ್ದಾರೆ.

ಹರೀಶ್ ಶಾಸ್ತ್ರಿ ಬಿ. ಎಂಬ ಹೆಸರಿನ ಭೌತಶಾಸ್ತ್ರ ಪ್ರಾಧ್ಯಾಪಕರ ಪ್ರಕಾರ, “ಮಾಧವ್ ಅವರು ಆ ಪುಸ್ತಕಗಳನ್ನು ಎನ್‌ಇಇಟಿ ಹಾಗೂ ಇತರೆ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವಂತಹ ಬಡ ವಿದ್ಯಾರ್ಥಿಗಳಿಗೆ ನೀಡುತಾರೆ. ಕೆಲವು ಪುಸ್ತಕಗಳನ್ನು ಯಾರು ಪಡೆಯದಿದ್ದರೆ ಅವುಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿರುವ ಪುಸ್ತಕ ಬ್ಯಾಂಕ್‌ ಗೆ ನೀಡುತ್ತಾರೆ,” ಎಂದು ಮಾಹಿತಿ ಒದಗಿಸಿದ್ದಾರೆ.

ಬಾಸಿತ್ ಅವರು ತಮ್ಮ ಜೀವನಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನೂ ಸಹ ಮಾಧವ್ ಅವರೊಂದಿಗೆ ಹಂಚಿಕೊಂಡಿದ್ದಾರಂತೆ. ಬಾಸಿತ್‌ಗೆ ಮಾಧವ್ ಅವರು ಗಾಡ್‌ ಫಾದರ್ ಆಗಿದ್ದಾರೆ. ಮಾಧವ್ ಈವರೆಗೆ ಮದುವೆ ಆಗಿಲ್ಲ. ಇತರರಿಗೆ ಸಹಾಯ ಮಾಡುವ ಅವರ ಗುಣವನ್ನು ಅವರ ಮುಂದೆ ಹೊಗಳಿದರೆ ಅವರು ನಾನು ಏನೂ ಮಾಡಿಲ್ಲ, ಕೇವಲ ನನ್ನ ಅಂಗಡಿಯಲ್ಲಿ ಲಭ್ಯವಿರುವುದನ್ನ ನೀಡಿದ್ದೇನೆ ಅಷ್ಟೇ ಅನ್ನುತ್ತಾರಂತೆ. ಇಂತಹವರಿಗೆ ಒಂದು ದೊಡ್ಡ ಸಲಾಂ. ಇಂತಹವರ ಸಂಖ್ಯೆ ಹೆಚ್ಚಲಿ ಎಂದು ಹಾರೈಸೋಣ ಅಲ್ಲವೇ?

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  small bookstore -Puttur – hope – poor students – afford -education