Saturday, August 29, 2026

BDA Apartments

Home Front Page ವಿದ್ಯುತ್‌ ಪರಿವರ್ತಕಗಳಲ್ಲಿ ದೋಷ ಕಂಡು ಬಂದರೆ ಸೆಸ್ಕ್ ವತಿಯಿಂದ ಉಚಿತ ಅಳವಡಿಕೆ

ವಿದ್ಯುತ್‌ ಪರಿವರ್ತಕಗಳಲ್ಲಿ ದೋಷ ಕಂಡು ಬಂದರೆ ಸೆಸ್ಕ್ ವತಿಯಿಂದ ಉಚಿತ ಅಳವಡಿಕೆ

ಮೈಸೂರು, ಮೇ 26, 2026 (www.justkannada.in):  ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್‌ ಪೂರೈಕೆ ಮಾಡುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ಸ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಗತ್ಯ ಕ್ರಮವಹಿಸಿದೆ. ಇದಕ್ಕಾಗಿ ಪ್ರತಿಯೊಂದು ತಾಲೂಕುಗಳಲ್ಲಿ ವಿದ್ಯುತ್‌ಪರಿವರ್ತಕಗಳ ಬ್ಯಾಂಕ್‌ ಸ್ಥಾಪಿಸಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ ಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಚಾವಿಸನಿನಿ, ತನ್ನ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ ಗಳನ್ನು ನಿಗಮದ ವಿವಿಧ ದಾಸ್ತಾನು ಕೇಂದ್ರಗಳಲ್ಲಿ ಬಫರ್‌ ಸ್ಟಾಕ್‌ ಗಳನ್ನು ಸಂಗ್ರಹಿಸಿ ಇರಿಸಲಾಗಿದೆ. ಇದರಿಂದ ತಾಲೂಕಿನ ಯಾವುದೇ ಪ್ರದೇಶದಲ್ಲಿರುವ ವಿದ್ಯುತ್‌ಪರಿವರ್ತಕಗಳಲ್ಲಿ ದೋಷ ಉಂಟಾದರೂ ತ್ವರಿತವಾಗಿ ಬದಲಾವಣೆ ಅಥವಾ ದುರಸ್ತಿ ಕಾರ್ಯಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮುಂಗಾರು ಕೂಡ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್‌ ಗಳಿಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ, ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಲು ಸೆಸ್ಕ್‌ ಸನ್ನದ್ಧವಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಟ್ರಾನ್ಸ್‌ಫಾರ್ಮರ್‌ ಗಳಲ್ಲಿ ದೋಷ ಕಂಡು ಬಂದಲ್ಲಿ ತಕ್ಷಣವೇ ಸೆಸ್ಕ್‌ 24*7 ಸಹಾಯವಾಣಿ 1912 ಅಥವಾ ಸಮೀಪದ ಸೇವಾಕೇಂದ್ರಗಳಿಗೆ ಮಾಹಿತಿ ನೀಡಿದಲ್ಲಿ, ಚಾವಿಸನಿನಿ., ವತಿಯಿಂದ ಉಚಿತವಾಗಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಲಾಗುವುದು. ಸದರಿ ಪರಿವರ್ತಕಗಳನ್ನುಅಳವಡಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ.ಈ ಸಂಬಂಧ ಯಾರಿಂದಾದರು ಶುಲ್ಕ ಪಾವತಿಸಲು ಬೇಡಿಕೆ ಹಾಕಿದಲ್ಲಿ, ಚಾವಿಸನಿನಿಯ ನಿಗಮ ಕಚೇರಿಗೆ ದೂರು ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವ್ಯಾಪ್ತಿಯಲ್ಲಿ ನಗರ ಅಥವಾ ಗ್ರಾಮೀಣ ಪ್ರದೇಶಗಳ ಗ್ರಾಹಕರು ಯಾವುದೇ ವಿದ್ಯುತ್‌ ಸಂಪರ್ಕ ಪಡೆಯಲು ನಿಗದಿತ ಶುಲ್ಕವನ್ನು ಪಾವತಿಸಿದಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು, ಇಲಾಖೆಯಿಂದಲೇ ಪೂರೈಕೆ ಮಾಡಿ, ಉಚಿತವಾಗಿ ನಿಯಮಾನುಸಾರ ಕಾಮಗಾರಿ ನಿರ್ವಹಿಸಿ ವಿದ್ಯುತ್‌ಸಂಪರ್ಕ ಕಲ್ಪಿಸಲಾಗುವುದು.ಒಂದೊಮ್ಮೆ ಗ್ರಾಹಕರಿಗೆ ತುರ್ತಾಗಿ ವಿದ್ಯುತ್‌ ಸಂಪರ್ಕ ಅಗತ್ಯವಿದ್ದಲ್ಲಿ, ಸ್ವಯಂ ಆಯ್ಕೆಯೊಂದಿಗೂ ಸಹ ವಿದ್ಯುತ್‌ ಸಂಪರ್ಕ ಪಡೆಯಬಹುದಾಗಿದೆ. ಈ ಕುರಿತು ಮಾಹಿತಿಗೆ ಗ್ರಾಹಕರು ಚಾವಿಸನಿನಿ(ಸೆಸ್ಕ್)‌ ಉಪವಿಭಾಗ/ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Key words: Free installation , CESC, power, transformers