ಅರಣ್ಯ, ವನ್ಯಜೀವಿ ರಕ್ಷಣೆಗೆ ಯೋಜನೆ ರೂಪಿಸಿ: ಲಕ್ಷ್ಮಣ್‌ ಸಲಹೆ

ಮೈಸೂರು,ಜನವರಿ,7,2026 (www.justkannada.in): ಅರಣ್ಯ ಹಾಗೂ ಪರಿಸರ ನಾಶದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಜಾರಿಗೊಳಿಸಬೇಕಾಗಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಹೇಳಿದರು.

ನಿವೃತ್ತ ಅರಣ್ಯಾಧಿಕಾರಿಗಳ ಸಂಘದಿಂದ ನಗರದ ರೇಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಇಬ್ಬರು ಮಹಿಳಾ ಐಎಫ್‌ಎಸ್ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಅರಣ್ಯ ನಾಶದ ಪರಿಣಾಮವನ್ನು ನಾವು ವನ್ಯಜೀವಿ ಹಾಗೂ ಮಾನವ ಸಂಘರ್ಷದ ರೂಪದಲ್ಲಿ ನೋಡುತ್ತಿದ್ದೇವೆ. ಅರಣ್ಯ ಹರಿದು ಹಂಚಿ ಹೋಗಿ ಸಂಘರ್ಷ ಪರಾಕಾಷ್ಠತೆಯನ್ನು ತಲುಪಿ ಜನ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಂಡರೆ ಮಾತ್ರ ಅರಣ್ಯ, ವನ್ಯಜೀವಿಗಳು ಉಳಿದು ನಾಡು ರಕ್ಷಣೆಯಾಗಲಿದೆ. ಜನ ನೆಮ್ಮದಿಯಿಂದ ಇರಬೇಕೆಂದರೆ ಅರಣ್ಯ ಸಂರಕ್ಷಣೆ ಅತೀ ಮುಖ್ಯ. ವಿಜ್ಞಾನಿಗಳು, ಅರಣ್ಯ ಸಂರಕ್ಷಕರು, ಆಡಳಿಗಾರರು ಇದಕ್ಕಾಗಿ ಸಹಭಾಗಿತ್ವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ನುಡಿದರು.

ಅರಣ್ಯ ಇಲಾಖೆಯಲ್ಲಿ ಹಲವು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಸಿಬ್ಬಂದಿಗಳೂ ಕೈಜೋಡಿಸಿ ಕೆಲಸ ಮಾಡಿದ್ದರಿಂದಲೇ ದೇಶದಲ್ಲಿ ಕರ್ನಾಟಕದ ಅರಣ್ಯಕ್ಕೆ ತನ್ನದೇ ಆದ ಮಹತ್ವವಿದೆ. ಈಗಿನ ತಲೆಮಾರಿನ ಹಲವು ಅಧಿಕಾರಿಗಳು ಅದೇ ರೀತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಂತಹ ಒತ್ತಡ ಬಂದರೂ ಸಂಯಮ, ಸಮಚಿತ್ತತೆ, ಸ್ನೇಹಮಯವಾಗಿ ಕೆಲಸ ಮಾಡುವುದು. ಮುಂದಾಳತ್ವ ವಹಿಸುವುದು ಅತಿಮುಖ್ಯ. ಇದಕ್ಕೆ ಈ ಇಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಲಾಗಿದೆ ಎಂದರು.

ಅರಣ್ಯ ಇಲಾಖೆಯಲ್ಲಿ ಹಲವು ವರ್ಷ ಕೆಲಸ ಮಾಡಿದ ಚಂಗಪ್ಪ ಅವರು ಈಗಲೂ ಸೇವಾಪರತೆಯನ್ನು ಮುಂದುವರೆಸಿದ್ದಾರೆ. ಮೈಸೂರು ರೇಸ್‌ಕ್ಲಬ್‌ನ ಸ್ಟೀವರ್ಡ್‌ ಆಗಿ ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಲಕ್ಷ್ಮಣ್‌ ಹೇಳಿದರು.

ಸದ್ಯ ಹಿಂದೆ ವಿಜಯಪುರ, ಬೆಂಗಳೂರು ನಂತರ ಈಗ ಕೋಲಾರದಲ್ಲಿ  ಡಿಸಿಎಫ್‌ ಆಗಿ ಅರಣ್ಯ ಒತ್ತುವರಿ ತೆರವು ಮಾಡಲು ಶ್ರಮ ಹಾಕುತ್ತಿರುವ ಸರೀನಾ ಸಿಕ್ಕಲಿಗಾರ,  ಕೊಡಗು, ಮಂಡ್ಯ, ಹುಣಸೂರು ನಂತರ ಈಗ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಸಂರಕ್ಷಣೆ ಜತೆಗೆ ಗಿರಿಜನರ ಹಿತ ರಕ್ಷಣೆಗೆ ಒತ್ತು ನೀಡುತ್ತಿರುವ ಪಿ.ಎ.ಸೀಮಾ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಅರಣ್ಯಾಧಿಕಾರಿಗಳಾದ ಎಂ.ಕೆ.ಅಪ್ಪಯ್ಯ, ಟಿ..ಬಾಲಚಂದ್ರ, ಯಾಲಕ್ಕಿ, ಎಚ್.ಸಿ.ಕಾಂತರಾಜು, ಶ್ರೀಧರ್‌, ರಾಮಲಿಂಗೇಗೌಡ, ನಾಗರಾಜ ಆಚಾರ್‌ ಮತ್ತಿತರರು ಹಾಜರಿದ್ದರು.

Key words: Formulate, plan , protect, forests, Laxman