ಜೆಡಿಎಸ್ ನಿಂದ ಮಾಜಿ ಸಂಸದ ಎಲ್.ಅರ್. ಶಿವರಾಮೇಗೌಡ ಉಚ್ಚಾಟನೆ.

ಬೆಂಗಳೂರು,ಜನವರಿ,31,2022(www.justkannada.in):  ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಒಕ್ಕಲಿಗ ಸಮುದಾಯದ ಹಿರಿಯರೂ ಆಗಿದ್ದ ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಲೋಕಸಭೆಯ ಮಾಜಿ ಸದಸ್ಯ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ಅನುಮತಿ ಪಡೆಯಲಾಗಿದ್ದು, ಶಿವರಾಮೇಗೌಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಸೂಚಿಸಲಾಗಿತ್ತು.  ಇದೀಗ ಎಲ್ ಆರ್ ಶಿವರಾಮೇಗೌಡರನ್ನ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮುನ್ನ  ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ,  ಸಮುದಾಯದ ಹಿರಿಯ ನಾಯಕರು ಹಾಗೂ ಇಡೀ ರಾಜ್ಯವೇ ಗೌರವಿಸುತ್ತಿದ್ದ ಜಿ. ಮಾದೇಗೌಡರಂಥ ಹಿರಿಯರ ಬಗ್ಗೆ ಶಿವರಾಮೇಗೌಡರು ಅಸಭ್ಯವಾಗಿ ಮಾತನಾಡಿರುವುದು ಅಕ್ಷ್ಯಮ್ಯ. ಮಾದೇಗೌಡರ ಬಗ್ಗೆ ಅವರು ಮಾತನಾಡಿರುವ ಆಡಿಯೋವನ್ನು ನಾನೂ ಕಳಿದ್ದೇನೆ. ಇಂಥ ನಡವಳಿಕೆಯನ್ನು ಸಹಿಸುವ ಪ್ರಶ್ನೆ ಇಲ್ಲ ಎಂದರು.

ಮಂಡ್ಯದ ರಾಜಕೀಯದ ಬಗ್ಗೆ ಮಾತನಾಡುತ್ತಾ  ಶಿವರಾಮೇಗೌಡರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಸಭ್ಯವಾಗಿ ಅವರು ಮಾತನಾಡಿರುವ ಮೊಬೈಲ್ ಕರೆಯ ಆಡಿಯೋ ಈಗ ವೈರಲ್ ಆಗಿದೆ. ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮಾದೇಗೌಡರ ಬಗ್ಗೆ ಅಂತಹ ಕೆಳಮಟ್ಟದ ಭಾಷೆ ಬಳಸುವ ಅಗತ್ಯ ಇರಲಿಲ್ಲ ಎಂದು ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಮಾದೇಗೌಡರಿಗೂ ಹಾಗೂ ನಮ್ಮ ಪಕ್ಷಕ್ಕೂ ರಾಜಕೀಯವಾಗಿ ವಿಭಿನ್ನತೆ ಇತ್ತು ನಿಜ. ಹಾಗೆಂದು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದನ್ನು ಒಪ್ಪಲಾಗದು. ಅಲ್ಲದೆ, ಮಾದೇಗೌಡರು ಇಂದು ನಮ್ಮ ನಡುವೆ ಬದುಕಿಲ್ಲ. ದಿವಂಗತ ನಾಯಕರ ಹೆಸರನ್ನು ಶಿವರಾಮೇಗೌಡರು ಯಾಕೆ ತಂದರೋ ಗೊತ್ತಿಲ್ಲ. ಇಂತಹ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೆಚ್.ಡಿಕೆ ಕಿಡಿಕಾರಿದರು.

ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದ ಕುಮಾರಸ್ವಾಮಿ ಅವರು,  ಮಾತೆತ್ತಿದರೆ ಹಣದ ಬಗ್ಗೆ ಶಿವರಾಮೇಗೌಡ ಹಣದ ಬಗ್ಗೆ ಮಾತನಾಡುತ್ತಾರೆ. ಹಣವನ್ನು ಇವರೊಬ್ಬರೇ ಕಂಡಿಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದೆ ಎಂದು  ಹೇಳಿದ್ದಾರೆ. 30 ಕೋಟಿ ರೂ. ಖರ್ಚು ಮಾಡಿರೋದನ್ನು ಹೇಳಿಕೊಂಡಿದ್ದಾರೆ. ಅವರು ಅಷ್ಟು ಹಣವನ್ನು ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.

ಪದೇ ಪದೆ ಶಿವರಾಮೇಗೌಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಇಂಥ ಚಾಳಿಯನ್ನು ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ. ಎಲ್ಲಕ್ಕೂ ಒಂದು ಇತಿಮಿತಿ ಇದೆ ಎಂದು ಅವರು ಹೇಳಿದರು.

ಇಬ್ರಾಹಿಂ ಏನ್ಮಾಡ್ತಾರೆ ಅಂತ ನೋಡೋಣ:

ಕಾಂಗ್ರೆಸ್ ಬಿಟ್ಟಿರುವ ಇಬ್ರಾಹಿಂ ಅವರು ಈಗಾಗಲೇ ರಾಜ್ಯ ಪ್ರವಾಸ ಅವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟಿದ್ದೇನೆ ಎಂದಿರುವ ಮತ್ತೆ ಆ ಪಕ್ಷಕ್ಕೆ ಹೋಗಲ್ಲ ಅಂತ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಇದೇ ಮಾತನ್ನು ಅವರು ಪುನಾ ತಿಳಿಸಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಎಂಬುದಾಗಿ  ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಅಲ್ಪಸಂಖ್ಯಾತ ನಾಯಕರ ಸಭೆ:

ಇಂದು ಪಕ್ಷದ ಕಚೇರಿಯಲ್ಲಿ ಅಲ್ಪಸಂಖ್ಯಾತ ನಾಯಕರ ಸಭೆ ನಡೆಯಿತು. ರಾಜ್ಯ ಮೂವತ್ತು ಜಿಲ್ಲೆಗಳಿಂದ ಮುಖಂಡರು ಬಂದಿದ್ದಾರೆ. ಪಕ್ಷವನ್ನು ಬಲವರ್ಧನೆ ಮಾಡುವುದು ಹಾಗೂ ಮುಂದಿನ ಚುನಾವಣೆಗೆ ಉತ್ತಮ ಸಾಧನೆ ಮಾಡಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದು ಅವರು ಪ್ರಶ್ನಯೊಂದಕ್ಕೇ ಉತ್ತರ ನೀಡಿದರು.

Key words: Former MP – L.R.Shivaramegowda- JDS