ಮೈಸೂರು,ಜನವರಿ,17,2026 (www.justkannada.in): ಮಹಾರಾಷ್ಟ್ರದ ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಜಯ ದೊರೆತಿದ್ದು, ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್ ನಾಯಕರು ತಲೆಬಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕು. ರಾಜ್ಯ, ಕೇಂದ್ರ ಸರ್ಕಾರಗಳ ಅಭಿವೃದ್ಧಿಗೆ ಮತದಾರರು ಮಣೆ ಹಾಕಿದ್ದರಿಂದಲೇ ಬಹುಮತ ಬರಲು ಕಾರಣವಾಗಿದೆ ಎಂದು ಮೈಸೂರು ಮಾಜಿ ಮೇಯರ್ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಕುಮಾರ್, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ ಏಕನಾಥ್ ಸಿಂಧೆ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರವೂ ಕೂಡ ಒತ್ತಾಸೆಯಾಗಿದೆ. ಈಗ ಮುಂಬಯಿ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದರಿಂದ ತ್ರಿಬಲ್ ಇಂಜಿನ್ ಸರ್ಕಾರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. ಚುನಾವಣೆಗಳಲ್ಲಿ ಸೋತರೂ ಇವಿಎಂ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ನಾಯಕರು ಜನರ ತೀರ್ಪಿಗೆ ತಲೆಬಾಗಬೇಕು. ಮಹಾರಾಷ್ಟ್ರದ ಜನರು ಬುದ್ಧಿವಂತರು. ಕಾಂಗ್ರೆಸ್ ಮಾಡುವ ಆರೋಪವನ್ನು ನಂಬಿ ಕೂರುವವರಲ್ಲ. ಕಾಂಗ್ರೆಸ್ ನಾಯಕರು ಮುಂದಾದರೂ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಮಹಾಯುತಿಗೆ ಭರ್ಜರಿ ಜಯ ಸಿಕ್ಕಿರುವುದರ ಹಿಂದೆ ಲಕ್ಷಾಂತರ ಜನರ ಶ್ರಮವಿದೆ. ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಒಂದಾಗಿ ಮುಂಬಯಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕನಸು ನನ ಸಾಗಿಲ್ಲ. ಭಾಷೆಯ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾದವರಿಗೂ ಜನರು ಸರಿಯಾದ ಪಾಠ ಕಲಿಸಿದ್ದಾರೆ. ಠಾಕ್ರೆ ಸಹೋದರರು ಒಂದಾದರೂ ಜನರು ಅಭಿವೃದ್ಧಿಗೆ ಮನ್ನಣೆ ಕೊಟ್ಟಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಗ್ರೇಟರ್ ಬೆಂಗಳೂರು ನಗರಪಾಲಿಕೆ ಚುನಾವಣೆ ನಡೆಸುವ ಜತೆಗೆ ಇತರೆ ಪಾಲಿಕೆಗಳ ಚುನಾವಣೆ ನಡೆಸಬೇಕು. ರಾಜ್ಯ ಸರ್ಕಾರದ ಕಾರ್ಯ ವೈಖರಿ, ಆಡಳಿತ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
Key words: BJP, wins ,Maharashtra, Mysore, Former Mayor, Shivakumar







