ಪ್ರಧಾನಿ ಮೋದಿ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ.

ಹುಬ್ಬಳ್ಳಿ, ಫೆಬ್ರವರಿ 27,2024(www.justkannada.in):  ಪ್ರಧಾನಿ ನರೇಂದ್ರ ಮೋದಿ ಸಮುದ್ರದ ಆಳದಲ್ಲಿ ನವಿಲುಗರಿ ನೆಟ್ಟರೆ ಚಿಗುರುತ್ತಾ ಎಂದು ಟೀಕಿಸಿದ್ದ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಮಜುನ ಖರ್ಗೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ  ಜಗದೀಶ್ ಶೆಟ್ಟರ್  ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇಡೀ ದೇಶ ಆರಾಧನೆ ಮಾಡುವ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಹೀಗಿರುವಾಗ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಅರ್ಥವೇ ಇಲ್ಲ ಎಂದರು.

ಇನ್ನು ರಾಜ್ಯಸಭಾ ಚುನಾವಣೆಯಲ್ಲಿ  ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ  ಅಡ್ಡ ಮತದಾನ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಚುನಾವಣಾ ಫಲಿತಾಂಶದ ನಂತರ ಅದು ಗೊತ್ತಾಗಲಿದೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ತಿಳಿಯಲಿದೆ. ಫಲಿತಾಂಶ ಬರುವವರೆಗೂ ಏನೂ ಹೇಳಲಾಗದು. ಕುದುರೆ ವ್ಯಾಪಾರವೊ ಏನೋ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಕಳಸಾ ಬಂಡೂರಿ ಯೋಜನೆಗೆ ಮತ್ತೆ ರೈತರಿಂದ ಹೋರಾಟ ಶುರು ವಿಚಾರ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಮನೋಹರ್ ಪರಿಕ್ಕರ್ ಗೋವಾ ಸಿಎಂ ಆಗಿದ್ದ ವೇಳೆ  ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಪಟ್ಟಿದ್ದೆವು.  ಮನೋಹರ್ ಪರಿಕ್ಕರ್ ಮನವೊಲಿಕೆ ಸಹ ಆಗಿತ್ತು. ಆದರೆ, ಆ ವೇಳೆ ಗೋವಾ ಕಾಂಗ್ರೆಸ್​​ನವರೇ ವಿರೋಧ ಮಾಡಿದ್ದರು. ಅಲ್ಲಿನ ಕಾಂಗ್ರೆಸ್ ನಾಯಕರಿಗೆ ತಿಳಿಹೇಳಿ ಅಂತ ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಹೇಳಿದ್ದೆ. ಕೆಲವರಿಂದಾಗಿ ಇದು ವಿಳಂಬವಾಗುತ್ತಿದೆ. ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದರು.

Key words: Former CM -Jagdish Shettar- against- Mallikarjuna Kharge – criticized- PM Modi.