ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ: ಶ್ವೇತಪತ್ರ’ ಹೊರಡಿಸಿ-ಹೆಚ್ ಡಿಕೆ ಆಗ್ರಹ.

ಬೆಂಗಳೂರು,ಮಾರ್ಚ್,10,2024(www.justkannada.in): ಈ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ ಸಿದ್ದರಾಮಯ್ಯನವರೇ? ಜನರ ಮುಂದೆ ಲೆಕ್ಕ ಇಡಿ. ಬೇಕಾದರೆ ‘ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ’ ಹೊರಡಿಸಿ. ನಿಮ್ಮ ಸರಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಇತಿಹಾಸದಲ್ಲಿ ಕಂಡೂ ಕೇಳರಿಯದ ಬರವಿದೆ. ಜಲಕ್ಷಾಮ ಬಿಗಡಾಯಿಸಿದೆ. ಹನಿ ನೀರಿಗೂ ತತ್ವಾರ, ಜನ ಜಾನುವಾರುಗಳ ಹಾಹಾಕಾರ. ಪರಿಸ್ಥಿತಿ ಹೀಗಿದ್ದರೂ  ಕರ್ನಾಟಕ ಸರಕಾರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ! ಲಜ್ಜೆಗೇಡು ಎಂದು ಕಿಡಿಕಾರಿದ್ದಾರೆ.

‘ರೋಮ್ ಹೊತ್ತು ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!’ ಸಿದ್ದರಾಮಯ್ಯನವರೇ ನೀವೇ ನಮ್ಮ   ನೀರೋ!! ರಾಜ್ಯದ ಪಾಲಿನ  ಝೀರೋ!! ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ..ಆ ಚಿಂತೆಯೇ ನಿಮ್ಮ ಪಕ್ಷ, ಸರಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು, ಆ ಪರಮೇಶ್ವರನ ಮಾತು ಒಂದೇ! ಸುಳ್ಳಾಗದು.

ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರಕಾರಕ್ಕೆ ₹2000 ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ, ತಹಶೀಲ್ದಾರುಗಳ ಪಿಡಿ ಖಾತೆಗೆ ನಿಮ್ಮ ಸರಕಾರ ಕನ್ನ ಹಾಕಿದೆ. ಜನರ ಹಾಹಾಕಾರವೇ ನಿಮಗೆ ಭರ್ಜರಿ ಆಹಾರ!! ಹೌದಲ್ಲವೇ? ಇದೆಂಥಾ ಸಿದ್ದನಾಮಿಕ್ಸ್  ಸಿದ್ದರಾಮಯ್ಯನವರೇ? ಎಂದು ಹೆಚ್.ಡಿಕೆ ಟೀಕಿಸಿದ್ದಾರೆ.

ಈ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ ಸಿದ್ದರಾಮಯ್ಯನವರೇ? ಜನರ ಮುಂದೆ ಲೆಕ್ಕ ಇಡಿ. ಬೇಕಾದರೆ ‘ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ’ ಹೊರಡಿಸಿ. ನಿಮ್ಮ ಸರಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ

ಒಂದು ವರ್ಷದಿಂದ ನಿಮ್ಮ ಇಡೀ ಸರಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ ‘ಜಾಹೀರಾತು ಜಾತ್ರೆ’ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ? ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದ್ದಾರೆ.

Key words: Former CM-HD kumaraswamy- advertising – last year-congress- government