ಬೆಂಗಳೂರಿನಲ್ಲಿ ಮೊದಲ ಔಷಧೀಯ ಸಸಿಗಳ ಉದ್ಯಾನವನ.

ಬೆಂಗಳೂರು, ಆಗಸ್ಟ್ 24, 2021 (www.justkannada.in): ಗಾರ್ಡನ್ ಸಿಟಿ ಎಂಬ ಹೆಸರನ್ನು ಗಳಿಸಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಮುಕುಟದಲ್ಲಿ ಮತ್ತೊಂದು ಗರಿ ಮೂಡಲಿದೆ. ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್ ನಲ್ಲಿ ಶೀಘ್ರದಲ್ಲೇ ಕನ್ಸ್ಟೆಲ್ಲೇಷನ್ ಪಾರ್ಕ್ (ಔಷಧೀಯ ಸಸಿಗಳ ಉದ್ಯಾನವನ) ಸ್ಥಾಪನೆಯಾಗಲಿದೆ. ಈ ಉದ್ಯಾನವದ ನಿರ್ಮಾಣವನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಸ್ಮಾರ್ಟ್ ಸಿಟಿ) ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಸಂಬಂಧಪಟ್ಟ ಪ್ರಾಧಿಕಾರವು ಈಗಾಗಲೇ ಕಬ್ಬನ್ ಪಾರ್ಕ್ ಒಳಗಿರುವ ಬಾಲ ಭವನದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಕೆಲಸ ಆರಂಭಿಸಿದೆ.

ಈ ಉದ್ಯಾನವನವನ್ನು ಕೇವಲ ಔಷಧೀಯ ಸಸ್ಯಗಳಿಗೆ ಮಾತ್ರ ಮೀಸಲಿರಿಸಲಾಗುತ್ತಿದೆ. ಇಲ್ಲಿ ಪೋಷಿಸಲಾಗುವ ಕೆಲವು ಪ್ರಮುಖ ಹಾಗೂ ಅಪರೂಪದ ಔಷಧೀಯ ಗುಣಗಳುಳ್ಳ ಸಸಿಗಳ ಪೈಕಿ: ಇಂಡಿಯನ್ ಗೂಸ್‌ ಬೆರಿ, ಫಿಕಸ್ ರೇಸ್‌ ಮೊಸ, ಮಿಮೊಸ, ಕಟೇಚು, ಬಬೂಲ್, ಫಿಕಸ್ ರೆಲಿಜಿಯೊಸ, ಮ್ಯಾಗ್ನೊಲಿಯಾ ಚಂಪಕ, ಬ್ಯಾನ್‌ಯನ್, ಅಶೋಕ, ಪ್ರೊಸ್ಪಿಸ್ ಸಿನರೇರಿಯಾ, ಜ್ಯಾಸ್ಮಿನ್, ಏಜಿಲ್ ಮಾರ್ಮೆಲೊಸ್, ಟರ್ಮಿನಾಲಿಯಾ ಅರ್ಜುನ, ಐರನ್‌ವುಡ್, ಬೇವು, ತೆಂಗು, ಸ್ಪ್ರೈಕ್ನೊಸ್ ನಕ್ಸ್-ವಾಮಿಕ ಮತ್ತು ನಿಒಲಾಮಾರ್ಕಿಯ ಕಡಂಬ, ಇವುಗಳು ಸೇರಿವೆ.

ಈ ಕುರಿತು ಮಾತನಾಡಿದ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಹೆಚ್.ಟಿ. ಬಾಲಕೃಷ್ಣ ಅವರು, “ಈ ಉದ್ಯಾನವನದ ವಿನ್ಯಾಸವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸಿದ್ಧಪಡಿಸಲಾಗಿದೆ. ನೀರಾವರಿ ಹಾಗೂ ಪೈಪ್‌ ಲೈನ್ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಈ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲಾಗುವುದು,” ಎಂದು ವಿವರಿಸಿದರು. ಭೇಟಿ ನೀಡುವವರು ಈ ಉದ್ಯಾನವನ್ನು ಪ್ರವೇಶಿಸಲು ಶುಲ್ಕ ಪಾವತಿಸಬೇಕಾಗುತ್ತದಂತೆ.

ಈ ಯೋಜನೆಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಶೇಷ ವಿನ್ಯಾಸಗಾರರು ಹಾಗೂ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಸ್ಮಾರ್ಟ್ ಸಿಟಿಗೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿರುವಂತೆ ಕೆಲವು ಔಷಧೀಯ ಸಸಿಗಳನ್ನು ಮರಗಳೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದಂತೆ.

ಮತ್ತೊಬ್ಬ ಅಧಿಕಾರಿಯೊಬ್ಬರು ಹೇಳಿದಂತೆ, “ನಮ್ಮ ಪೂರ್ವಜರು ಮರಗಳನ್ನು ದೇವರ ರೀತಿಯಲ್ಲಿ ಕಾಣುತ್ತಿದ್ದರು. ಒಂದು ನಕ್ಷತ್ರಪುಂಜದ ಹುಟ್ಟಿನ ಜೊತೆಗೆ ಒಂದು ಔಷಧೀಯ ಗುಣವುಳ್ಳ ಸಸಿಯನ್ನು ನೆಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತದೆ ಎಂದೇ ನಂಬಿದ್ದರು. ಈ ಮರಗಳು ಅನೇಕ ಕೀಟಗಳು ಹಾಗೂ ಉದ್ಯಾನವನಕ್ಕೆ ಭೇಟಿ ನೀಡುವವರಿಗೆ ಒಂದು ವರದಾನವಾಗಲಿದೆ. ಈ ಮರಗಳು ಗಾಳಿಯನ್ನು ಶುದ್ಧೀಕರಿಸುತ್ತವೆ. ಇಲ್ಲಿ ನಾವು ನೆಡುತ್ತಿರುವ ಪ್ರತಿ ಮರವೂ ಸಹ ವಿಶೇಷ ಗುಣವನ್ನು ಹೊಂದಿದೆ,” ಎಂದು ವಿವರಿಸಿದರು.

ಮೈಸೂರು, ಹುಬ್ಬಳ್ಳಿ ಹಾಗೂ ಚಿಕ್ಕಬಳ್ಳಾಪುರಗಳಲ್ಲಿಯೂ ಈ ರೀತಿಯ ಕನ್ಸ್ಟಲೇಷನ್ ಉದ್ಯಾನಗಳಿವೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: First –medicinal- herb- garden – Bangalore.