ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ: 7 ಅಂಗಡಿಗಳು ಸುಟ್ಟು ಭಸ್ಮ

ಚಾಮರಾಜನಗರ,ಜನವರಿ,9,2026 (www.justkannada.in):  ಪ್ರಸಿದ್ಧ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ ಉಂಟಾಗಿ 7 ಅಂಗಡಿಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬಿಳಿಗಿರಿರಂಗನಾಥ ಬೆಟ್ಟದ ಬಸ್ ನಿಲ್ದಾಣದ ಬಳಿಯಿದ್ದ ಹೊಟೇಲ್ ಹಾಗೂ ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಬೆಂಕಿ ವ್ಯಾಪಿಸಿ ಧಗಧಗಿಸಿದ್ದು, ಅಗ್ನಿ ಅವಘಡದಲ್ಲಿ 3ಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟಗೊಂಡು ಮತ್ತಷ್ಟು ಬೆಂಕಿ ತೀವ್ರತೆ ಹೆಚ್ಚಾಗಿ ಆತಂಕ ಸೃಷ್ಟಿಸಿತ್ತು.

ಪ್ರತಿದಿನ ಸಂಜೆಯ ಬಳಿಕ ಚೆಕ್ ಪೋಸ್ಟ್ ಬಂದಾಗುವ ಹಿನ್ನೆಲೆ ಅಂಗಡಿ, ಹೊಟೇಲ್​ ನಲ್ಲಿ ಯಾರೂ ಇರಲಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಲಕ್ಷಾಂತರ ರೂ‌. ಮೌಲ್ಯದ ವಸ್ತುಗಳು ಬೂದಿಯಾಗಿದೆ.

ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಗ್ನಿ ಅವಘಡ ನಡೆದಿದೆ‌.

Key words: Fire , Biligirirangana Hill,  7 shops, burnt