ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಎಫ್ ಐಆರ್ ದಾಖಲು.

ಮಂಡ್ಯ,ಡಿಸೆಂಬರ್,26,2023(www.justkannada.in):  ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಆರೋಪದ ಮೇಲೆ  ಆರ್ ಎಸ್ ಎಸ್  ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಈ ಸಂಬಂಧ ಹೋರಾಟಗಾರ್ತಿ ನಝ್ಮಾ ನಝೀರ್ ಚಿಕ್ಕನೇರಳೆ ಅವರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.

ಕಳೆದ ಭಾನುವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ್ದ  ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲೀಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ದೂರು ನೀಡಿರುವ  ನಝ್ಮಾ ನಝೀರ್ ಚಿಕ್ಕನೇರಳೆ ಅವರು, ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗೆಗೆ ಅಶ್ಲೀಲವಾಗಿ ಪ್ರಭಾಕರ್ ಭಟ್ ಮಾತನಾಡಿದ್ದಾರೆ ,  ಇದು ಮಹಿಳೆಯರ ಘನತೆಗೆ ಅಡ್ಡಿಯಾದ ಪ್ರಕರಣವಾದ್ದರಿಂದ ಐಪಿಸಿ ಸೆಕ್ಷನ್ 294, 354, 509, 506, ಪ್ರಕಾರ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Key words: FIR –filed- against -RSS leader -Kalladka Prabhakar Bhat