3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ, ಸೆಪ್ಟಂಬರ್, 27,2023(www.justkannada.in): ಕಾವೇರಿ ನೀರು ನಿಯಂತ್ರಣಾ ಸಮಿತಿಯು 3000 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು  ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಲೈ ಮಹದೇಶ್ವರ ಬೆಟ್ಟದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಇಂದು ಮಹದೇಶ್ವರ ದೇವಸ್ಥಾನದ ಪ್ರಾಧಿಕಾರದ ಸಭೆಯಿದ್ದು, ಪ್ರಾಧಿಕಾರದ ಅಧ್ಯಕ್ಷನಾಗಿ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.

ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ.

ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ  ಮೌಢ್ಯ ಈಗ ಹೋಗಿದೆ ಎಂದರು.

ಸೆ.29 ಕರ್ನಾಟಕ ಬಂದ್ : ಯಾರಿಗೂ ತೊಂದರೆಯಾಗಬಾರದು.

ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.

Key words: file objection – order -drain -3000 cusecs – water- CM- Siddaramaiah