ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರ ಪ್ರತಿಭಟನೆ: ಡಿಕೆ ಶಿವಕುಮಾರ್  ರಾಜೀನಾಮೆಗೆ ಕುರುಬೂರು ಶಾಂತಕುಮಾರ್ ಆಗ್ರಹ.

ಮೈಸೂರು,ಸೆಪ್ಟಂಬರ್,19,2023(www.justkannada.in): ತಮಿಳುನಾಡಿಗೆ ನೀರು ಹರಿಸುತ್ತಿರುವ  ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿದಿದರು.

ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಆದೇಶ ಹಿನ್ನೆಲೆ, ಮೈಸೂರಿನ PWD ಗೆಸ್ಟ್ ಹೌಸ್ ನಲ್ಲಿ ರೈತ ಮುಖಂಡರ ಜೊತೆ   ಕುರುಬೂರು ಶಾಂತಕುಮಾರ್  ಸಭೆ ನಡೆಸಿ ಕಾವೇರಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದರು.

ಈ ಕುರಿತು ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ರಾಜಕೀಯ ದೊಂಬರಾಟ ಆಡುತ್ತಿದೆ. ರೈತರ ಮರಣ ಶಾಸನವನ್ನ ಬರೆದಾಗಿದೆ. ಇದೊಂದು ನೀತಿಗೆಟ್ಟ ಸರ್ಕಾರ, ಮಾನಗೆಟ್ಟ ಸರ್ಕಾರ. ಈ ಸರ್ಕಾರಕ್ಕೆ ಪಾಠ ಕಲಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ರೈತರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಚುನಾವಣೆಗೋಸ್ಕರ ತಮಿಳುನಾಡು ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಇಂತಹ ಬೇಜವಾಬ್ದಾರಿ ನಿರ್ಧಾರವನ್ನ ಖಂಡಿಸುತ್ತೇವೆ. ಕೂಡಲೇ ಜಲಸಂಪನ್ಮೂಲ ಸಚಿವ ಸ್ಥಾನದಿಂದ ಡಿಕೆ ಶಿವಕುಮಾರ್ ರನ್ನ ಕೈ ಬಿಡಬೇಕು ಎಂದು ಆಗ್ರಹಿಸಿ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

ರೈತರ ಸಭೆ ಮುಗಿಯುತ್ತಿದ್ದಂತೆ ರೈತರಿಂದ ದಿಢೀರ್ ಪ್ರತಿಭಟನೆ: ರಸ್ತೆ ತಡೆದು ಆಕ್ರೋಶ.

ಕಾವೇರಿ ನದಿ ನೀರು ವಿವಾದ ವಿಚಾರವಾಗಿ ರೈತರ ಸಭೆ ಮುಗಿಯುತ್ತಿದ್ದಂತೆ ರೈತರು ದಿಢೀರ್ ಪ್ರತಿಭಟನೆ ಕೈಗೊಂಡರು.  ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಬಳಿ ಸಾರಿಗೆ ಬಸ್ ಸೇರಿದಂತೆ ಎಲ್ಲಾ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು,  ಬಸ್ ಗಳ ಮೂಲಕ ದೂರದ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಟ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು ಕೂಡಲೇ ನೀರು ನಿಲ್ಲಿಸುವಂತೆ ಆಗ್ರಹಿಸಿದರು.

Key words: Farmers -protest – draining water – Tamil Nadu- Kuruburu Shanthakumar-mysore