ಕೊಪ್ಪಳ,ಅಕ್ಟೋಬರ್,8,2026 (www.justkannada.in): ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರನ್ನ ರಾಜ್ಯ ಸರ್ಕಾರ ಕೈಬಿಡುವುದಿಲ್ಲ ಎಂದು ಡಿಸಿಎಂ ಪರಮೇಶ್ವರ್ ಭರವಸೆ ನೀಡಿದರು.
ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ರೈತರನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಅಗತ್ಯವಿದ್ದರೆ ಸಾಲ ತಗೊಂಡಾದರೂ ರೈತರಿಗೆ ನೆರವು ನೀಡುತ್ತೇವೆ. ರಾಜ್ಯದ 240 ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯವು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬರ ನಿರ್ವಹಣೆಯಲ್ಲಿ ನಮ್ಮ ಸರ್ಕಾರ ಕುಡಿಯುವ ನೀರಿನ ಪೂರೈಕೆ, ರೈತರಿಗೆ ನೆರವು ಮತ್ತು ಕೂಲಿ ಕೆಲಸ ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಬರದಿಂದಾಗಿ ಜನರು ಊರು ಬಿಟ್ಟು ಗುಳೆ ಹೋಗುತ್ತಿದ್ದಾರೆ. ಇತ್ತೀಚೆಗೆ ಒಂದು ಲಂಬಾಣಿ ತಾಂಡಾದ ಜನರು ಇಡೀ ಊರನ್ನೇ ತೊರೆದು ಹೋಗುವ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಅವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲೇ ಕೆಲಸ ದೊರೆತರೆ ಜನರು ಗುಳೆ ಹೋಗುವುದನ್ನು ತಡೆಯಬಹುದಾಗಿದೆ. ರೈತರನ್ನು ಉಳಿಸಿಕೊಂಡರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಪರಮೇಶ್ವರ್ ತಿಳಿಸಿದರು.






