ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ.

ಮೈಸೂರು,ಜುಲೈ,28,2021(www.justkannada.in): ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.jk

ತಾಲ್ಲೂಕಿನ ಸಿದ್ದರಾಮನಹುಂಡಿಯ ಜಯರಾಮೇಗೌಡ ಆತ್ಮಹತ್ಯೆ ಮಾಡಿಕೊಂಡ ಯುವ ರೈತ, ಇವರಿಗೆ ಕೇವಲ ಮೂವತ್ತೆರಡು ವರ್ಷ ವಯಸ್ಸಾಗಿತ್ತು, ಬಡಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ರೈತ ಜಯರಾಮೇಗೌಡ ಅವರು ತಾವು ಬೆಳೆದಿದ್ದ ಬೆಳೆಗಳಿಗಾಗಿ ಮಾದಾಪುರ ವಿಎಸ್ ಎಸ್ ಎನ್ ಬ್ಯಾಂಕ್ ಹಾಗೂ ಖಾಸಗಿಯವರಿಂದ 6 ಲಕ್ಷ ರೂಪಾಯಿಗಳಷ್ಟು ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

ಆದರೆ ಬೆಳೆದಿದ್ದ ಬೆಳೆ ಸಮರ್ಪಕವಾಗಿ ಬಾರದೆ ಸಾಲ ತೀರಿಸಲು ಸಾಧ್ಯವಾಗದ ಕಾರಣ ಮನೆಯಲ್ಲಿ ಬೆಳಿಗ್ಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ, ಕೂಡಲೇ ಅವರ ಪತ್ನಿ ಮತ್ತು ಸಂಬಂಧಿಕರು ಜಯರಾಮೇಗೌಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಹಶೀಲ್ದಾರ್ ನರಗುಂದ ಕಂದಾಯ ಅಧಿಕಾರಿಗಳಾದ ಮಹೇಶ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,  ರೈತ ಜಯರಾಮೇಗೌಡ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಪತ್ನಿ ಮತ್ತು ಸಂಬಂಧಿಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಜಯರಾಮೇಗೌಡ ಪತ್ನಿ ಮತ್ತು ಮಗು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Key words: Farmer- suicides – debt-mysore-HD kote