ಎಲ್ಲಾ ಕಾರ್ಖಾನೆಗಳು ಕರ್ನಾಟಕದ ಉದ್ಯೋಗ ನೀತಿ ಪಾಲಿಸಬೇಕಿದೆ- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ….

ಬೆಂಗಳೂರು,ಜೂ,19,2020(www.justkannada.in): ಉದ್ದಿಮೆಗಳ ಸ್ಥಾಪನೆಯ ಹಿಂದೆ ಸರ್ಕಾರ ಕನ್ನಡಿಗರಿಗೆ ಉದ್ಯೋಗ ದೊರಕಿಸಿದರೆ ಅವರ ಬದುಕು ಹಸನಾಗುತ್ತದೆ ಎಂಬ ಕನಸನ್ನು ಕಂಡಿರುತ್ತದೆ. ಹಾಗಾಗಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಉದ್ಯೋಗಗಳು ಸಂಪೂರ್ಣವಾಗಿ ಕನ್ನಡಿಗರಿಗೆ ದೊರೆಯಲು ಸಹಕಾರಿಯಾಗಲಿದ್ದು, ಸರ್ಕಾರ ಈ ಬಗ್ಗೆ ನೀತಿ-ನಿರೂಪಣೆಯನ್ನು ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ಸಲಹೆ ನೀಡಿದರು.

ಕೋವಿಡ್-19 ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗಾರಿಕೆ ಮತ್ತು ವಾಣಿಜ್ಯ  ನಿರ್ದೇಶನಾಲಯದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಕನ್ನಡ ಅನುಷ್ಠಾನ ಪರಿಶೀಲನೆ ನಡೆಸಿದರು. ಕೈಗಾರಿಕೆಗಳಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿರುವ ಮತ್ತು ಸರೋಜಿನಿ ಮಹಿಷಿ ವರದಿಯನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವ ಸಂಬಂಧ ಕೈಗಾರಿಕಾ ಸಚಿವರಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.factories -employment -policy –Karnataka-Kannada Development Authority- Chairman -T.S Nagabarana

ಐಟಿ-ಬಿಟಿಯಂತಹ ದೊಡ್ಡ ಮಟ್ಟದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುವಂತಾದರೆ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿ ಕನ್ನಡಿಗರಿಗೆ ಕೆಲಸ ದೊರೆಯಲಿದ್ದು, ಇದರಿಂದ ಅವರ ಬದುಕು ಹಸನಾಗಲಿದೆ. ಡಿಪ್ಲಮೋ, ಐಟಿಐ ನಂತಹ ಕೋರ್ಸ್ ಗಳ ಪಠ್ಯಪುಸ್ತಕಗಳು ಕನ್ನಡಕ್ಕೆ ತರ್ಜುಮೆಗೊಳಿಸುವ ಪ್ರಕ್ರಿಯೆಗಳು ನಡೆಯಬೇಕಿದೆ. ಆಗ ಮಾತ್ರ ಎಲ್ಲ ತಂತ್ರಜ್ಞಾನದ ಜ್ಞಾನ ದೇಸೀಯವಾಗಿ ಸಿಗುವಂತಾಗುತ್ತದೆ. ಇದು ಪರಿಣಾಮಕಾರಿಯಾಗಿದ್ದು, ಖಾಸಗಿ ಕಾಲೇಜುಗಳು ಇಂತಹ ನಿಯಮವನ್ನು ಅನುಷ್ಠಾನಗೊಳಿಸಬೇಕಿದೆ ಎಂದು ದು ಟಿಎಸ್ ನಾಗಾಭರಣ ತಾಕೀತು ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗಾಭರಣ ಅವರು, ನಿರ್ದೇಶನಾಲಯದ ಜಾಲತಾಣಗಳು ಕನ್ನಡದಲ್ಲಿಲ್ಲ. ಇದನ್ನು ಕೂಡಲೇ ಕನ್ನಡಕ್ಕೆ ಭಾಷಾಂತರಿಸಬೇಕು ಮತ್ತು ಕರ್ನಾಟಕ.ಗೋ.ಇನ್ ಗೆ ಮೈಗ್ರೇಡ್ ಆಗಬೇಕಿದೆ, ನಿರ್ದೇಶನಾಲಯದ ವ್ಯಾಪ್ತಿಯ ಇಲಾಖೆಗಳಲ್ಲಿ ಸರ್ಕಾರ ಕನ್ನಡ ಅನುಷ್ಠಾನವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.

ಸರ್ಕಾರ ಅಭಿವೃದ್ಧಿ ಪಡಿಸಿದ ನೂರಾರು ಎಕರೆ ಜಮೀನನ್ನು ಕಾರ್ಖಾನೆಗಳ ಸ್ಥಾಪನೆಗಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಆದರೆ ಉದ್ದಿಮೆ ಸ್ಥಾಪಿಸಿದ ಉದ್ದಿಮೆದಾರರು ಕನ್ನಡಿಗರನ್ನೇ ಕಡೆಗಣಿಸುವುದಲ್ಲದೆ, ಉದ್ಯೋಗದಲ್ಲಿರುವ ಕನ್ನಡಿಗರನ್ನು ಶೋಷಣೆ ಮಾಡುತ್ತಿವೆ. ಇದಕ್ಕೆ ಬಳ್ಳಾರಿಯ ಜಿಂದಾಲ್ ಮತ್ತು ಆಡುಗೋಡಿಯ ಬಾಷ್ ಕಂಪನಿಗಳು ತಕ್ಕ ಉದಾಹರಣೆ ಎಂದು ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಕೈಗಾರಿಕೆ ಮತ್ತು ವಾಣಿಜ್ಯ  ನಿರ್ದೇಶನಾಲಯದ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ,  ಜಂಟಿ ನಿರ್ದೇಶಕರಾದ ಹೊಸಮನಿ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Key words: factories -employment -policy –Karnataka-Kannada Development Authority- Chairman -T.S Nagabarana