ಮೈಸೂರು, ಡಿಸೆಂಬರ್,22, 2025 (www.justkannada.in): ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮಹತ್ವದ ಹೆಜ್ಜೆ ಇರಿಸಿದ್ದು, ನಿಗಮದ ಕಚೇರಿಯ ಆವರಣದಲ್ಲಿ ವಿದ್ಯುತ್ ವಾಹನಗಳಿಗಾಗಿ(ಇವಿ) ಮೇಲ್ದರ್ಜೆಗೇರಿಸಿದ ಅತ್ಯಾಧುನಿಕ 30 ಕೆವಿ ಫಾಸ್ಟ್ ಚಾರ್ಜಿಂಗ್ ಘಟಕವನ್ನು ಉದ್ಘಾಟಿಸಲಾಯಿತು. 
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಈ ಚಾರ್ಜಿಂಗ್ ಘಟಕವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ, “ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ನಿಗಮದ ವತಿಯಿಂದ ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ವಾಯುಮಾಲಿನ್ಯ ತಡೆಯುವ ಜತೆಗೆ ಇಂಧನದ ಆಮದು ಅವಲಂಬನೆ ತಗ್ಗಿಸಿ, ಹಸಿರು ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ,” ಎಂದರು.
ನಿಗಮದ ಕಚೇರಿಯಲ್ಲಿ ಈ ಹಿಂದೆ ಇದ್ದ ಇವಿ ಚಾರ್ಜಿಂಗ್ ಘಟಕದ ಸಾಮರ್ಥ್ಯವನ್ನು ಪ್ರಸ್ತುತ 30 ಕೆವಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದ್ದು, ಒಂದೇ ಸಮಯದಲ್ಲಿ ಎರಡು ಕಾರುಗಳನ್ನು ಚಾರ್ಜ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಇರುವುದರಿಂದ ಒಂದು ಕಾರನ್ನು 40ರಿಂದ 45 ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.
“ಝಿಯಾನ್ ಎಲೆಕ್ಟ್ರಿಕ್ ಸಂಸ್ಥೆ ಸಹಯೋಗದೊಂದಿಗೆ ನೂತನ ಇವಿ ಚಾರ್ಜಿಂಗ್ ಘಟಕ ಆರಂಭಿಸಿದ್ದು, ಝಿಯಾನ್ ಆ್ಯಪ್ ಮೂಲಕ ಚಾರ್ಜಿಂಗ್ ಹಬ್ ಬಳಸಬಹುದು. ಹೊಸದಾಗಿ ಆರಂಭಿಸಿರುವ ಇವಿ ಚಾರ್ಜಿಂಗ್ ಘಟಕವನ್ನು ಪ್ರಾಯೋಗಿಕವಾಗಿ ಸೆಸ್ಕ್ ಕಚೇರಿಯ ಇವಿ ವಾಹನಗಳ ಬಳಕೆಗೆ ಮಾತ್ರವೇ ಸೀಮಿತಗೊಳಿಸಲಾಗಿದೆ. ಇದರ ಕಾರ್ಯಕ್ಷಮತೆ, ನಿರ್ವಹಣೆ ಮತ್ತು ಬಳಕೆಯ ಅನುಭವವನ್ನು ಪರಿಶೀಲಿಸಿದ ಬಳಿಕ ಮುಂದಿನ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ನಿಗಮವು ಚಿಂತನೆ ನಡೆಸಿದೆ.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಗೆ ಪ್ರೋತ್ಸಾಹ ನೀಡುವಲ್ಲಿ ಸೆಸ್ಕ್ ಸದಾ ಸನ್ನದ್ಧವಾಗಿದೆ. ಇದಕ್ಕಾಗಿ ನಿಗಮ ಕಚೇರಿಯಲ್ಲಿ ಇವಿ ಫಾಸ್ಟ್ ಚಾರ್ಜಿಂಗ್ ಹಬ್ ಆರಂಭಿಸಿದ್ದು, ಭವಿಷ್ಯದಲ್ಲಿ ಮೈಸೂರು ನಗರ ಹಾಗೂ ಸೆಸ್ಕ್ ವ್ಯಾಪ್ತಿಯ ಇತರ ಪ್ರದೇಶಗಳಲ್ಲಿ ಇನ್ನಷ್ಟು ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ)ರಾದ ಶರಣಮ್ಮ ಎಸ್. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕರಾದ ಎನ್.ಆರ್. ತಸ್ನೀಂ ತಬಸ್ಸುಂ, ಆರ್. ರಾಮಸ್ವಾಮಿ, ಎಚ್.ಆರ್. ದಿನೇಶ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Key words: Upgraded, EV, fast charging unit, inaugurated, CESC office







