ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ : ಸಚಿವ ಎಸ್.ಟಿ ಸೋಮಶೇಖರ್ ರಿಂದ ಅಭಿನಂದನೆ..

ಮೈಸೂರು,ಮಾರ್ಚ್,17,2021(www.justkannada.in): ಮೈಸೂರು ಜಿಲ್ಲೆಯಲ್ಲಿಯೆ ಚಿತ್ರನಗರಿ ಸ್ಥಾಪಿಸಲಾಗುವುದು ಎಂದು ವಿಧಾನಪರಿಷತ್ ನಲ್ಲಿ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ  ಸಿ.ಸಿ. ಪಾಟೀಲ್ ಹೇಳಿಕೆ ನೀಡಿದ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಸಚಿವ ಎಸ್.ಟಿ ಸೋಮಶೇಖರ್, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರು ಇಂದು ವಿಧಾನಪರಿಷತ್ ನಲ್ಲಿ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡುವ ಬಗ್ಗೆ ಹೇಳಿಕೆ ನೀಡಿರುವುದಕ್ಕೆ  ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು  ವಾರ್ತಾ ಖಾತೆ ಸಚಿವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಸಿನಿಮಾ ಉದ್ಯಮ ವ್ಯಾಪಕವಾಗಿ ಬೆಳೆದಿದ್ದರೂ ಸಹ ರಾಜ್ಯದಲ್ಲಿ ಈವರೆಗೆ ಯಾವುದೇ ಚಿತ್ರನಗರಿ ನಿರ್ಮಾಣವಾಗಿಲ್ಲ. ಈ ಕೊರತೆಯನ್ನು ಮನಗಂಡು ಮೈಸೂರಿನಿಂದ ಸುಮಾರು 20 ಕಿ.ಮೀ. ದೂರದ  ಹಿಮ್ಮಾವು  ಸಮೀಪ 110 ಎಕರೆ  ಜಾಗದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಯೋಜನೆಯನ್ನು   ಕಾರ್ಯಗತಗೊಳಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಜಮೀನುಗಳನ್ನು ಸಹ ಗುರುತಿಸಲಾಗಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಸಿನಿಮಾ ರಂಗಕ್ಕೆ ಹಾಗೂ ಸ್ಥಳೀಯವಾಗಿ ಹಲವಾರು ಅನುಕೂಲಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು, ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಸಲು ಚಿತ್ರನಗರಿ ನೆರವಾಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರು ಭಾಗದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂಬುದು ಬಹುಕಾಲದ ಒತ್ತಾಯ….

ಹಾಗೆಯೇ ಮೈಸೂರು ಸುತ್ತಮುತ್ತ ನೂರಕ್ಕೂ ಹೆಚ್ಚು ತಾಣಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳ ನೂರಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಮೈಸೂರು ಅರಮನೆ, ಲಲಿತಮಹಲ್ ಹೋಟೆಲ್, ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾನ, ಮೃಗಾಲಯ, ಮೈಸೂರು ವಿಶ್ವವಿದ್ಯಾಲಯ, ಬಲಮುರಿ, ಎಡಮುರಿ, ಕೆಆರ್‌ಎಸ್, ತಲಕಾಡು,  ಸೋಮನಾಥಪುರ, ಶಿವನಸಮುದ್ರ, ಶ್ರೀರಂಗಪಟ್ಟಣ, ಕುಕ್ಕರಹಳ್ಳಿ   ಕೆರೆಯಂಥ ಅತ್ಯುತ್ತಮ ತಾಣಗಳು ಈ ಭಾಗದಲ್ಲಿವೆ. ಚಿತ್ರನಗರಿ ನಿರ್ಮಾಣಕ್ಕೆ ಗುರುತಿಸಿರುವ ಪ್ರದೇಶ ಮೈಸೂರು ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ.  ಹೆಚ್ಚು  ಚಿತ್ರೀಕರಣ ನಡೆಯುವ ಕಾರಣ ಮೈಸೂರು ಭಾಗದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂಬುದು ಕನ್ನಡ  ಸಿನಿಮಾ ನಿರ್ಮಾಪಕರ ಬಹುಕಾಲದ ಒಲವು ಹಾಗೂ ಒತ್ತಾಯ ಕೂಡ ಆಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸದರು.

ಮೈಸೂರಿನ ಸುತ್ತಾಮುತ್ತ 15 ರಿಂದ 20 ಕಿ. ಮೀ. ವಾಪ್ತಿಯಲ್ಲಿ ಚಿತ್ರೀಕರಣಕ್ಕೆ ಅನುಕೂಲವಾಗುವ ನೂರಾರು ಸ್ಥಳಗಳಿವೆ. ನದಿಗಳು, ಬೆಟ್ಟಗುಡ್ಡಗಳು, ಅರಣ್ಯವಿದೆ. ಹತ್ತಾರು ಅರಮನೆಗಳಿವೆ. ಸಂಚಾರ ದಟ್ಟಣೆ ಮುಕ್ತ ರಸ್ತೆಗಳು, ರಾಜಪರಂಪರೆ ಹೊಂದಿರುವ ಮೈಸೂರಿನ ಅಂಬಾವಿಲಾಸ ಅರಮನೆ ಸೇರಿದಂತೆ ಇನ್ನಿತರ ಇತಿಹಾಸ ಪ್ರಸಿದ್ಧ ಸ್ಥಳಗಳು ಪೌರಾಣಿಕ ಸಿನಿಮಾ ನಿರ್ಮಾಣಕ್ಕೆ ಹೇಳಿ ಮಾಡಿಸಿದ ಸ್ಥಳಗಳಂತಿವೆ. ಮಾತ್ರವಲ್ಲದೆ ಹಳೆ ಮೈಸೂರು ಭಾಗ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಮೇರು ನಟ ಡಾ. ರಾಜ್‌ಕುಮಾರ್ ಅವರು  ಹಳೇ ಮೈಸೂರಿಗೆ  ಸೇರಿದ್ದ ಚಾಮರಾಜನಗರ ಜಿಲ್ಲೆಯವರು.   ಡಾ. ಅಂಬರೀಶ್,   ಡಾ. ವಿಷ್ಣುವರ್ಧನ್ ಅವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್, ಹಿರಿಯ ಪೋಷಕ ನಟ ಅಶ್ವಥ್ ಸೇರಿದಂತೆ ಇಂದಿನ ಯುವ ಪ್ರತಿಭೆಗಳು ಮೈಸೂರು ಮೂಲದವರಾಗಿದ್ದಾರೆ. ಹೀಗೆ ಕನ್ನಡಕ್ಕಾಗಿ ತನ್ನದೇ ಕೊಡುಗೆ ನೀಡಿರುವ ಮೈಸೂರಿನಲ್ಲಿಯೆ ಚಿತ್ರನಗರಿ ನಿರ್ಮಾಣವಾಗಬೇಕು ಎಂಬ ಒತ್ತಾಯ ಮೈಸೂರಿನ ಜನತೆಯದ್ದಾಗಿದೆ.Establishment –film city-Mysore- Congratulations - Minister -ST Somashekhar.

ಫಿಲ್ಮ್ ಸಿಟಿಯು ಚಲನಚಿತ್ರ ತಯಾರಿಕೆ, ಆತಿಥ್ಯ ವಲಯ, ಚಲನಚಿತ್ರ ತರಬೇತಿ/ಅನುಭವ ವಲಯ  ಮತ್ತು ಮನರಂಜನಾ ವಲಯಕ್ಕಾಗಿ ಉತ್ಪಾದನೆ ಮತ್ತು ನಂತರದ ನಿರ್ಮಾಣ ವಲಯಗಳನ್ನು ಹೊಂದಿರಬೇಕು. ಪ್ರದೇಶದ ದೃಷ್ಟಿಯಿಂದ, ಮೈಸೂರು ಫಿಲ್ಮ್ ಸಿಟಿಯು ಲಂಡನ್ ನ ಪೈನ್‌ವುಡ್ ಸ್ಟುಡಿಯೋಸ್ ಮತ್ತು  ಸಿಂಗಾಪುರದ ಯೂನಿವರ್ಸಲ್  ಸ್ಟುಡಿಯೋವನ್ನು  ಮೀರಿಸುತ್ತದೆ   ಎಂದು ಚಿತ್ರ ತಜ್ಞರು   ಅಭಿಪ್ರಾಯ ಪಟ್ಟಿದ್ದಾರೆ.  ಮೈಸೂರು ಐತಿಹಾಸಿಕ ಸಾಂಸ್ಕೃತಿಕ ಹಾಗೂ ಪಾರಂಪರಿಕ   ಮತ್ತು ಸ್ವಚ್ಚ ನಗರಿ ಎಂಬ   ಬಿರುದಿಗೆ ಪಾತ್ರವಾಗುತ್ತಿದ್ದು, ಪ್ರತಿ ವರ್ಷ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ ಈ ಎಲ್ಲಾ ಕಾರಣಗಳಿಂದ ಚಿತ್ರನಗರಿಯನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ತಾವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಜಿಲ್ಲೆಯ ಮಹಾ ಜನತೆಯ ಪರವಾಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಎಸ್.ಟಿ ಸೋಮಶೇಖರ್ ಸಿಎಂ ಮತ್ತು ಸಚಿವರಿಗೆ ಮನವಿ ಮಾಡಿದ್ದಾರೆ.

ದಿನಾಂಕ 3-3 2021 ರಂದು ಮಾನ್ಯ ಮುಖ್ಯಮಂತ್ರಿಗಳನ್ನು  ಭೇಟಿ ಮಾಡಿ, ಈ ಸಂಬಂಧ  ಮನವಿ  ಕೊಟ್ಟಿದ್ದು ಸರಿಯಷ್ಟೆ,ಗೌರವಾನ್ವಿತ ಮುಖ್ಯಮಂತ್ರಿಗಳು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮೈಸೂರಿನಲ್ಲಿ ಚಿತ್ರನಗರಿ ಪ್ರಾರಂಭಿಸಲು ಸೂಚಿಸಿದ್ದು, ಇದಕ್ಕಾಗಿ ಮೈಸೂರು ನಗರದ ಜನತೆಯ ಪರವಾಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಇಂದು  ವಿಧಾನಪರಿಷತ್ ನಲ್ಲಿ ಮಾನ್ಯ ವಾರ್ತಾಸಚಿವರು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಲಾಗುವುದೆಂದು ತಿಳಿಸಿದ್ದು, ಕಡತವನ್ನು ಮುಖ್ಯಮಂತ್ರಿಗಳ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.  ಹೀಗಾಗಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರನ್ನು ಕೂಡ ಅಭಿನಂದಿಸುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

Key words: Establishment –film city-Mysore- Congratulations – Minister -ST Somashekhar.