ಮಲ್ಲೇಶ್ವರಂನಲ್ಲಿ 10 ಲ್ಯಾಂಗ್ವೇಜ್ ಲ್ಯಾಬ್ ಸ್ಥಾಪನೆ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಜನವರಿ,11,2023(www.justkannada.in): ಯುವಜನರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವ ನಿಟ್ಟಿನಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ 10 ಲ್ಯಾಂಗ್ವೇಜ್ ಲ್ಯಾಬ್ ಗಳನ್ನು ಸ್ಥಾಪಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಮತ್ತು ಸ್ಥಳೀಯ ಶಾಸಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿ ಇರುವ ಸರಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಉದ್ಯೋಗ ಅವಕಾಶಗಳಿಗೆ ಕೊರತೆ ಇಲ್ಲ. ಮುಖ್ಯಮಂತ್ರಿಗಳ ಮತ್ತು ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯಡಿ 18ರಿಂದ 35 ವರ್ಷಗಳ ಒಳಗಿನ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಟ್ಟು, ಉದ್ಯೋಗಗಳಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ನುಡಿದರು.

ಸ್ಕಿಲ್ ಪೋರ್ಟಲ್ ವೇದಿಕೆಯಲ್ಲಿ ಈಗಾಗಲೇ 250 ಕಂಪನಿಗಳು ನೋಂದಣಿ ಆಗಿವೆ. ಹಾಗೆಯೇ ಸ್ಕಿಲ್ ಕನೆಕ್ಟ್ ಉಪಕ್ರಮದಡಿ 25 ಸಾವಿರ ಉದ್ಯೋಗ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಅವರು ನುಡಿದರು.

ಬೆಂಗಳೂರು ಇಂದು ದೇಶದ ಜ್ಞಾನ, ಆರ್ಥಿಕ, ಸ್ಟಾರ್ಟಪ್ ಮತ್ತು ಅಗ್ರಿಟೆಕ್ ರಾಜಧಾನಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಬೆಂಗಳೂರಿನಲ್ಲಿ ಯುವಜನರ ಉಜ್ವಲ ಭವಿಷ್ಯ ಅಡಗಿದೆ. ಹೀಗಾಗಿ ಈಗ ಲಕ್ಷಗಟ್ಟಲೆ ಜನರಿಗೆ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಇಡೀ ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ ಎಂದು ಅವರು ವಿವರಿಸಿದರು.

ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಕೂಡ ಸರಕಾರವು ವಿಶೇಷ ತರಬೇತಿಗೆ ವ್ಯವಸ್ಥೆ ಮಾಡಿದೆ. ಸರ್ವರಿಗೂ ಉದ್ಯೋಗ ಎನ್ನುವುದೇ ಸರಕಾರದ ನೀತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇಂದಿನ ಉದ್ಯೋಗ ಮೇಳದಲ್ಲಿ 125 ಕಂಪನಿಗಳು ಪಾಲ್ಗೊಂಡಿದ್ದು,28 ಸಾವಿರ ಉದ್ಯೋಗ ಅವಕಾಶಗಳು ಲಭ್ಯವಿವೆ. ಎಸ್ಸೆಸ್ಸೆಲ್ಸಿಯಿಂದ ಹಿಡಿದು ಎಂಜಿನಿಯರಿಂಗ್ ಪದವೀಧರರವರೆಗೆ ಇಲ್ಲಿ ಅವಕಾಶ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಭಾ, ಉಪನಿರ್ದೇಶಕ ಶ್ರೀರಾಮ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Key words: Establishment – 10 language labs – Malleswaram- Minister- Ashwath Narayan