ಮಾನವನಿಂದ ಇಡೀ ವಿಶ್ವವೇ ಅಪಾಯದಲ್ಲಿ ಸಿಲುಕಿದೆ- ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕಳವಳ.

ಮೈಸೂರು,ಜುಲೈ,18,2022(www.justkannada.in):  ಮಾನವರು ಸುಲಭ ಜೀವಿಗಳಾಗುವ ಅವಸರದಲ್ಲಿ ಇಡೀ ವಿಶ್ವವನ್ನೇ ಅಪಾಯಕ್ಕೆ ಸಿಲುಕಿಸಿದ್ದೇವೆ. ಇದು ಹೀಗೆ ಮುಂದುವರಿದರೆ ಈ ವಿಶ್ವ ಉಳಿಯುವುದಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕಳವಳ ವ್ಯಕ್ತಪಡಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಎನ್‌ ಎಸ್‌ ಎಸ್ ಭವನದಲ್ಲಿ ನಡೆದ 2020-21ನೇ ಸಾಲಿನ ಎನ್ ಎಸ್ ಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ‘‘ಇವತ್ತಿನ ಸಂದರ್ಭ ಅದೆಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲಾ ವಿಜ್ಞಾನಿಗಳು ಹೇಳುವ ಪ್ರಕಾರ ಮಾನವರು ಸುಲಭ ಜೀವಿಗಳಾಗುವ ಅವಸರದಲ್ಲಿ ಇಡೀ ವಿಶ್ವವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ. ಹೀಗೆ ಹೋದರೆ ಈ ಜಗತ್ತು ಉಳಿಯುವುದಿಲ್ಲ. ಇದರೊಂದಿಗೆ ಸಸ್ಯಸಂಕುಲ ಹಾಗೂ ಪಕ್ಷಿ ಪ್ರಾಣಿ ಪ್ರಬೇಧವನ್ನೂ ನರಕಕ್ಕೆ ಕರೆದುಕೊಂಡು ಹೋಗುತ್ತೇವೆ. ಸಾಮೂಹಿಕ ಆತ್ಮಹತ್ಯೆ ಕಡೆ ಮನುಕುಲ ಹೊರಟಿದೆ ಎಂದು ಹೇಳಿದರು.

ಇಂತಹ ಸಮಯದಲ್ಲಿ ವಿಶ್ವವಿದ್ಯಾಲಯಗಳು ದಾರಿದೀಪವಾಗಬೇಕಿತ್ತು. ಆದರೆ, ಅವುಗಳು ಯಾವ ಕಡೆ ಹೋಗುತ್ತಿವೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅದು ಆತ್ಮಘಾತುಕವಾಗುತ್ತದೆ. 1960ರಿಂದಲೂ ಜಗತ್ತಿನಲ್ಲಿ ನಡೆಯುತ್ತಿರುವ ತಲ್ಲಣಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಎನ್‌ ಎಸ್‌ ಎಸ್ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ. ಅದು ತನ್ನ ಮೂಲ ಆಶಯವನ್ನು ತಲುಪಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ.

ನಮ್ಮಲ್ಲಿ ಇರುವುದು ಎರಡೇ ಜಾತಿ. ಒಂದು ಸುಲಭ ಜೀವಿಗಳ ಜಾತಿ, ಮತ್ತೊಂದು ಶ್ರಮ ಜೀವಿಗಳ ಜಾತಿ. ಇವುಗಳ ನಡುವೆ ನೂರಾರು ಜಾತಿಗಳನ್ನು ನಾವು ಇಟ್ಟುಕೊಂಡು ಕಚ್ಚಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಶ್ರಮಜೀವಿಗಳನ್ನು ಹೇಗೋ ಕಷ್ಟಪಟ್ಟು ವಿವಿಗೆ ಕರೆತಂದು ಯಂತ್ರಗಳ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಸುಲಭವಾಗಿ ಜೀವಿಗಳಾಗಿ ಮತಾಂತರ ಮಾಡುವ ಕೆಲಸವನ್ನು ವಿವಿಗಳು ಮಾಡುತ್ತಿವೆ. ಯಾವುದೇ ಮತಾಂತದ ಹೊಂದುವ ಜೀವಿ ಅಪ್ಪಿತಪ್ಪಿಯೂ ತನ್ನ ಹಳೆ ಭಾಷೆ, ಸಂಸ್ಕೃತಿ, ಆಚರಣೆ ಕಡೆ ಮತ್ತೆ ನೋಡುವುದಿಲ್ಲ. ಹಾಗಾಗಿ ವಿವಿಗಳು ಶ್ರಮ ಜೀವಿಗಳನ್ನು ಮತ್ತಷ್ಟು ಕೀಳಾಗಿ ಮಾಡುವ ಕೆಲಸ ಆಗುತ್ತಿದೆ. ಸುಲಭ ಜೀವಿ ಹಾಗೂ ಶ್ರಮಜೀವಿಗಳ ನಡುವೆ ಎನ್ ಎಸ್ ಎಸ್ ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದರು.

ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಬಿ. ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್ ಇದ್ದರು

ಪ್ರಶಸ್ತಿ ವಿತರಣೆ:

ಅತ್ಯುತ್ತಮ ಘಟಕಗಳು: ಶೇಷಾದ್ರಿಪುರಂ ಪದವಿ ಕಾಲೇಜು, ಡಿಡಿ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಣಸೂರು, ಮಹಿಳಾ ಸರ್ಕಾರಿ ಕಾಲೇಜು, ಮದ್ದೂರು.

ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು: ಶೇಷಾದ್ರಿಪುರಂ ಕಾಲೇಜಿನ ಡಾ.ರಾಘವೇಂದ್ರ ಆರ್., ಹುಣಸೂರು ಡಿಡಿ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕಿರಣ್‌ ಕುಮಾರ್ ಸಿ.ಆರ್., ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಡಾ.ನಮ್ರತಾ ಜಿ.ಆರ್.

ಅತ್ಯುತ್ತಮ ಸ್ವಯಂ ಸೇವಕರು: ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಲ್ಲಪ್ಪ ಶ್ರೀಶೈಲ ಪಟ್ಟಣಶೆಟ್ಟಿ. ಹುಣಸೂರಿನ ರತ್ನಪುರಿ ವಿಎಸ್‌ ಎಸ್ ಪ್ರಥಮ ದರ್ಜೆ ಕಾಲೇಜಿನ ಭಾನುಪ್ರಕಾಶ್.

ಸ್ವಯಂ ಸೇವಕಿಯರು: ಮಹಾರಾಣಿ ಮಹಿಳಾ ಕಾಲೇಜಿನ ಶ್ರೀಲಲಿತ ಎನ್.ಕೆ., ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ನಿಖಿತಾ ಬಿ.ಎನ್., ಉಕಾ ಸುಬ್ಬರಾಯಚಾರ್ ಸ್ಮರಣಾರ್ಥ ಪ್ರಶಸ್ತಿ: ಜೀವನ್, ಮಧುಸೂದನ್ ಎಸ್., ಭಾವನ ಅನುಷಾ ಸಿ.

Key words: entire-universe – danger –humans-Prasanna Heggodu