`ಕುಶಾ ಕೀ ಕಹಾನಿ’ : ಇದು ಆನೆಗಳ ‘ ಲವ್ ಸ್ಟೋರಿ’..!

ಮೈಸೂರು, ಸೆ.28, 2021 : (www.justkannada.in news ) ವಿಜಯ ಕರ್ನಾಟಕ ಪತ್ರಿಕೆ, ಮೈಸೂರು ಆವೃತ್ತಿಯ ಮುಖ್ಯ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಅವರು ಆನೆಗಳ ಕುರಿತು ನಾಲ್ಕು ಕೃತಿಗಳನ್ನು ರಚಿಸಿದ್ದು, ಅಕ್ಟೋಬರ್ ಮೊದಲ ವಾರ ನಡೆಯಲಿರುವ ವನ್ಯಜೀವಿ ಸಪ್ತಾಹದಲ್ಲಿ ಲೋಕಾರ್ಪಣೆಯಾಗಲಿದೆ.

ಇದರಲ್ಲಿ ಪ್ರಮುಖ ಆಕರ್ಷಣೆ `ಕುಶಾ ಕೀ ಕಹಾನಿ- A True Love Story’

ದುಬಾರೆ ಆನೆ ಶಿಬಿರದ ಸದಸ್ಯನಾಗಿದ್ದ ಕುಶಾ ಆನೆಯ ಲವ್ ಸ್ಟೋರಿಯನ್ನು ಆಧಾರಿಸಿ ರಮೇಶ್ ಉತ್ತಪ್ಪ ಕೃತಿ ರಚಿಸಿದ್ದಾರೆ. ಇದಕ್ಕೆ ಪ್ರೇಮಕವಿ ಎಂದೇ ಖ್ಯಾತಿಗಳಿಸಿರುವ ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಆಕರ್ಷಕ ಮುನ್ನುಡಿ ಬರೆದಿದ್ದಾರೆ.

`ಇಂತಹ ಕೃತಿಯೊಂದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಪ್ರಾಣಿಗಳು ಕೂಡ ಪ್ರೀತಿಸುತ್ತವೆ, ಅವುಗಳಿಗೆ ಮನಸ್ಸಿದೆ ಎನ್ನುವುದನ್ನು ಕೃತಿಯಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿರುವ ಅವರು ಕೃತಿಯನ್ನು ಬಹುವಾಗಿ ಮೆಚ್ಚಿದ್ದಾರೆ. `ಇದೊಂದು ಥೇಟ್ ಸಿನಿಮಾ ಕಥೆಯಾಗಬಹುದು’ ಎಂದು ಹೇಳಿದ್ದಾರೆ.

ಅದೇ ರೀತಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನೋದ ಕುಮಾರ್ ನಾಯಕ್ ಕೃತಿಯನ್ನು ಓದಿ `ಇದು ಪ್ರಾಣಿ ವಿಜ್ಞಾನದ ಕೌತುಕ’ ಎಂದಿದ್ದಾರೆ. `ಇದೊಂದು ಅಪರೂಪದ ಕೃತಿ. ನನ್ನ ಮನಸ್ಸುನ್ನು ಕಲಕಿದೆ. ಓದಿ ಕಣ್ಣೀರು ಬಂತು. ಇದು ಪುಸ್ತಕ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೀಗೆ, ಬಿಡುಗಡೆಗೂ ಮುನ್ನ ಕೃತಿಯನ್ನು ಓದಿದವರು ಅಚ್ಚರಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಾಣಿಪ್ರಿಯರಲ್ಲಿ ತೀವ್ರ ಆಸಕ್ತಿ ಕೆರಳಿಸಿದೆ.

ಏನಿದು ಲವ್ ಸ್ಟೋರಿ:

ಇದೊಂದು ಮನ ಮಿಡಿಯುವ ಪ್ರೇಮ ಕಥೆ. ದುಬಾರೆ ಆನೆ ಶಿಬಿರದ ಸದಸ್ಯ ಕುಶ ಕಾಡಿನಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳುತ್ತಾನೆ. ನಂತರ ಕದ್ದುಮುಚ್ಚಿ ಪ್ರೇಮ ಸಲ್ಲಾಪ ನಡೆಯುತ್ತದೆ. ನಂತರ ಅವರಿಬ್ಬರು ಓಡಿ ಹೋಗುತ್ತಾರೆ. ಅವರದ್ದೇ ಪ್ರತ್ಯೇಕ ಲೋಕ.. ಸುಂದರ ಬದುಕು. ಆದರೆ, ಅಷ್ಟರಲ್ಲಿ ವಿಲನ್ ಎಂಟ್ರಿಯಾಗತ್ತಾನಾ..? ಅವರ ಪ್ರೇಮದ ಸಂಕೇತದ ಕುಡಿ ಮೊಳಕೆಯೊಡೆಯುತ್ತದಾ..? ಆತನ ಪ್ರೇಮ ದಡ ಸೇರುತ್ತದಾ, ಕೊನೆಗೆ ಅವರಿಬ್ಬರೂ ಒಂದಾಗಿಯೇ ಇರುತ್ತಾರಾ.. ದುರಂತ ಅಂತ್ಯ ಕಾಣುತ್ತದಾ.. ಪ್ರೀತಿ ಜಯವಾಯಿತೇ ಅಥವಾ ಸೋತು ಹೋಗಿತೇ… ಇದು ಕಥೆಯ ಕ್ಲೈಮ್ಯಾಕ್ಸ್. ಇವೆಲ್ಲ ಕಲ್ಪನೆಯ ಕಥೆಯಲ್ಲ. ಕುಶನ ಬದುಕಿನಲ್ಲಿ ನಡೆದದ್ದು.

ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಕೃತಿಯನ್ನು ಪ್ರಕಟಿಸುತ್ತಿದೆ. ಈ ಕೃತಿ ಮುಂದಿನ ವಾರ ನಿಮ್ಮ ಕೈ ಸೇರಲಿದೆ. ( ಲೇಖಕರ ಮೊಬೈಲ್ ಸಂಖ್ಯೆ: 9483049005.)

key words : elephant-kusha-true-love-story-ramesh-uthappa-Mysore