ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇ-ಪ್ರಶ್ನೆಗಳ ಬ್ಯಾಂಕ್ ಶೀಘ್ರ

ಬೆಂಗಳೂರು:ಜುಲೈ-16: ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಅಧಿಕ ಅಂಕಗಳಿಸಲು ಅನುಕೂಲವಾಗುವಂತೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇ-ಪ್ರಶ್ನೆಗಳ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಿದ್ದು, ಇನ್ಮುಂದೆ ಮುಂದೆ ವಿದ್ಯಾರ್ಥಿಗಳಿಗೆ ಹಳೇ ಪ್ರಶ್ನೆ ಪತ್ರಿಕೆಗಳು ಒಂದೇ ಕಡೆ ಸಿಗಲಿವೆ.

ಹಳೇ ಪ್ರಶ್ನೆ ಪತ್ರಿಕೆಗಳನ್ನು ಸ್ಕಾ್ಯನ್ ಮಾಡಿ ನೇರವಾಗಿ ಎಸ್ಸೆಸ್ಸೆಲ್ಸಿ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಶ್ನೆ ಪತ್ರಿಕೆ ರೂಪಿಸುವ ತಜ್ಞರಿಗೂ ಅನುಕೂಲವಾಗಲಿದ್ದು, ತಜ್ಞರು ಹಳೇ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಮತ್ತು ಕೇಳದೇ ಉಳಿದಿರುವ ಪ್ರಶ್ನೆಗಳನ್ನು ಆಯ್ಕೆ ಮಾಡುವುದಕ್ಕೆ ಸುಲಭವಾಗಲಿದೆ. 2020ರ ಪರೀಕ್ಷೆ ವೇಳೆಗೆ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ಪ್ರಶ್ನೆಪತ್ರಿಕೆಗಳು ದೊರೆಯಲಿದೆ.

ಇಷ್ಟು ವರ್ಷ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇ-ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ಸ್ಥಾಪಿಸಿರಲಿಲ್ಲ. ವಿದ್ಯಾರ್ಥಿಗಳು ಪುಸ್ತಕ ಮಾರಾಟ ಮಳಿಗೆ ಅಥವಾ ಹಳೇ ವಿದ್ಯಾರ್ಥಿಗಳಿಂದ ಪ್ರಶ್ನೆ ಪತ್ರಿಕೆ ಪಡೆದು, ಇಲ್ಲವೇ ಗೈಡ್​ಗಳ ಮೂಲಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.

ಪಿಯು ಮಾದರಿ: ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಕಳೆದೆರಡು ವರ್ಷದಿಂದ ಇ- ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ತೆರೆದಿದೆ. ಇದರಲ್ಲಿ ಕೇವಲ ಹಳೇ ಪ್ರಶ್ನೆ ಪತ್ರಿಕೆಗಳು ಮಾತ್ರವಲ್ಲ, ಖಾಸಗಿ ಪ್ರಶ್ನೆ ಪತ್ರಿಕೆಗಳನ್ನು ಸಹ ಅಪ್​ಲೋಡ್ ಮಾಡುತ್ತಿದೆ. ವಿದ್ಯಾರ್ಥಿಗಳು ನೇರವಾಗಿ ಡೌನ್​ಲೋಡ್ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ಮಾದರಿಯನ್ನು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅನುಸರಿಸಲು ನಿರ್ಧರಿಸಿದೆ.

2020ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಇ-ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ಸ್ಥಾಪಿಸುತ್ತಿದ್ದೇವೆ.

|ವಿ.ಸುಮಂಗಲಾ ನಿರ್ದೇಶಕಿ, ರಾಜ್ಯಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಕೃಪೆ:ವಿಜಯವಾಣಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇ-ಪ್ರಶ್ನೆಗಳ ಬ್ಯಾಂಕ್ ಶೀಘ್ರ
e-questions-bank-quick-for-sslc-students