ಹೊಸ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ‘ಭಾಗ್ಯವಂತರು’ ಜುಲೈ 8ಕ್ಕೆ ರೀ ರಿಲೀಸ್

ಬೆಂಗಳೂರು, ಜೂನ್ 28, 2022 (www.justkannada.in): ವರನಟ ಡಾ ರಾಜ್‌ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಭಾಗ್ಯವಂತರು’ ಮರು ಬಿಡುಗಡೆ ಆಗುತ್ತಿದೆ.

ಹೌದು. ನಲವತ್ತೈದು ವರ್ಷಗಳ ನಂತರ ಹೊಸ ತಂತ್ರಜ್ಞಾನದೊಂದಿಗೆ “ಭಾಗ್ಯವಂತರು” ಚಿತ್ರ ಮರು ಬಿಡುಗಡೆಯಾಗುತ್ತಿದೆ.‌ ಮುನಿರಾಜು.ಎಂ ಈ ಚಿತ್ರವನ್ನು ಈಗ ಬಿಡುಗಡೆ ಮಾಡುತ್ತಿದ್ದಾರೆ.

7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಭಾಗ್ಯವಂತರು” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.

ಈ ಹಿಂದೆಯೂ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳು ಸಹ ಮರು ಬಿಡುಗಡೆಗೊಂಡಿವೆ. ‘ಸತ್ಯ ಹರಿಶ್ಚಂದ್ರ’ ಹಾಗೂ ಇನ್ನಿತರೆ ಸಿನಿಮಾಗಳು ಹೊಸ ತಂತ್ರಜ್ಞಾನದೊಂದಿಗೆ ಬಣ್ಣ ತುಂಬಿಕೊಂಡು ಮರುಬಿಡುಗೆಯಾಗಿದ್ದವು.

“ಭಾಗ್ಯವಂತರು” ನಂತರ ಮುಂದೆ “ಹುಲಿ ಹಾಲಿನ ಮೇವು” ಸೇರಿದಂತೆ ಅಣ್ಣಾವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.