ಕೈ ಕೊಟ್ಟ ಮುಂಗಾರು ಮಳೆ: ಶಾಲೆಗೆ ಗೈರಾಗಿ ಪೋಷಕರ ಜೊತೆ ಗುಳೆ ಹೊರಟ ಮಕ್ಕಳು.  

ಚಾಮರಾಜನಗರ,ಜನವರಿ,3,2024(www.justkannada.in): ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದು ಜಲಾಶಯಗಳು ಭರ್ತಿಯಾಗದೇ ಕೃಷಿಗಿರಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನೆರೆಯ ರಾಜ್ಯಗಳಿಗೆ ಗುಳೆ ಹೋಗುವ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ.

ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ಕೂಲಿ ಹರಸಿ ಗುಂಡ್ಲುಪೇಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರು ನೆರೆ ರಾಜ್ಯ ಕೇರಳ ಮತ್ತು ತಮಿಳುನಾಡಿಗೆ ಗುಳೆ ಹೊರಟಿದ್ದು, ಪೋಷಕರ ಜೊತೆ ಶಾಲಾ ಮಕ್ಕಳು ಸಹ  ಶಾಲೆಗೆ ಗೈರಾಗಿ ಗುಳೆ ಹೋಗುತ್ತಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮದ ಶಾಲೆಗಳಲ್ಲಿ ಸುಮಾರು 24 ಮಕ್ಕಳು ಡ್ರಾಪೌಟ್ ಆಗಿದ್ದು, ಶಾಲೆ ಬಿಟ್ಟು ಪೋಷಕರ ಜೊತೆ ನೆರೆಯ ರಾಜ್ಯಗಳಿಗೆ ಹೊರಟಿದ್ದಾರೆ. ಇತ್ತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎಂಬ ಆಶಯವನ್ನ ಸರ್ಕಾರ ಹೊಂದಿದೆ. ಆದರೆ  ಗುಳೆ ಹೋಗುವ ಮೂಲಕ ಮಕ್ಕಳು ಶಾಲೆಯಿಂದ ವಂಚಿತರಾಗುತ್ತಿದ್ದಾರೆ.

ಕೂಲಿ ಹರಸಿ ಹೋಗುವ ತಂದೆ ತಾಯಿ  ತಮ್ಮ ಮಕ್ಕಳನ್ನು ಸಹ ಜೊತೆಗೆ ಕರೆದೋಯ್ಯುತ್ತಿದ್ದು ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಕುತ್ತು ಉಂಟಾಗಬಹುದು.   ಗುಂಡ್ಲುಪೇಟೆ ತಾಲ್ಲೂಕು ಒಂದರಲ್ಲೇ ಸದ್ಯಕ್ಕೆ 24 ಮಕ್ಕಳು ಡ್ರಾಪೌಟ್ ಆಗಿದ್ದು, 12 ಗಂಡು 12 ಹೆಣ್ಣು ಮಕ್ಕಳು ಕೇರಳಕ್ಕೆ ಗುಳೆ ಹೋಗಿದ್ದಾರೆ. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಆದರೆ  ಜಿಲ್ಲಾಡಳಿತ ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮಕ್ಕಳ ಭವಿಷ್ಯದ ಜೊತೆ ಪೋಷಕರು ಮತ್ತು ಜಿಲ್ಲಾಡಳಿತ ಆಟವಾಡುತ್ತಿದ್ದು  ಮುಂದೆ ಇಂತಹ ಗುಳೆ ಹೋಗುವವರನ್ನು ತಡೆಗಟ್ಟಬೇಕು ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬುದು ಎಲ್ಲರ ಆಶಯವಾಗಿದೆ.

Key words:  does not –Rain- Children- left –school- migration- with – parents.