Sunday, August 23, 2026

BDA Apartments

Home Front Page ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ: ‘ಸೇರಿದ್ದರೆ’ ಅದಕ್ಕೆ ನನ್ನ ಒಪ್ಪಿಗೆ ಇಲ್ಲ- ಪತ್ರ ಬರೆದ...

ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ: ‘ಸೇರಿದ್ದರೆ’ ಅದಕ್ಕೆ ನನ್ನ ಒಪ್ಪಿಗೆ ಇಲ್ಲ- ಪತ್ರ ಬರೆದ ಸಾಹಿತಿ ದೇವನೂರ ಮಹದೇವ

ಬೆಂಗಳೂರು,ಮೇ,24,2022(www.justkannada.in): ನೂತನ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು,  ತಮ್ಮ ಪಠ್ಯ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದು, ತಮ್ಮ ಪಾಠ ಕೈಬಿಡಬೇಕೆಂದು ಪತ್ರ ಬರೆದಿದ್ದಾರೆ.

ಈ ಕುರಿತು ಪತ್ರಬರೆದಿರುವ ದೇವನೂರ ಮಹದೇವ,  ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ. ಸೇರಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿದ್ದಾರೆ. ಅವರು ಬರೆದಿರುವ ಪತ್ರದ ಸಾರಾಂಶ ಈ ಕೆಳಕಂಡಂತಿದೆ..

ಪಠ್ಯ ಪರಿಷ್ಕರಣೆಯ ವಾದವಿವಾದಗಳು ನಡೆಯುತ್ತಿದೆ. ಹತ್ತನೆ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ, ಕೆಲವು ಸಲ ಸೇರಿದ್ದನ್ನು ಕೈಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿಗಳಿಗೆ ಗಳಿಗೆಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ‘ಸೇರಿಸಿರದಿದ್ದರೆ’ ನನಗೆ ಹೆಚ್ಚು ಸಂತೋಷವಾಗುತ್ತದೆ. ‘ಸೇರಿದ್ದರೆ’ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ.

ಯಾಕೆಂದರೆ, ಈ ಹಿಂದೆ ಪಠ್ಯಗಳಲ್ಲಿದ್ದ ಎಲ್‌.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್  ಮುಂತಾದವರ ಕತೆ, ಲೇಖನಗಳನ್ನು ಕೈಬಿಡಲಾಗಿದೆ ಎಂದರೆ, ಯಾರು ಕೈಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೊ ತಿಳಿದಿಲ್ಲ ಎಂತಲೇ ಅರ್ಥ.

ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎನ್ನುತ್ತಾರೆ. ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ.90ರಷ್ಟು ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆಮನೆ ವಾಸನೆ ಪ್ರಿಯವಾಗುವಂತೆ! ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ. ಮುರಳಿ ಮನೋಹರ ಜೋಷಿಯವರು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುರ್ವರ್ಣ ಹಿಂದೂ ಪ್ರಭೇದದ ಆರೆಸ್ಸೆಸ್‌ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ.

ಈ ಪಠ್ಯಗಳೆಲ್ಲಾ ಪ್ರಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸ್ ಆಪ್, ಇಮೇಲ್, ಆನ್ಲೈನ್ ಕ್ಲಾಸ್  ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Key words: Do not -include – my story – text-Devanura Mahadev