ಪಾದಯಾತ್ರೆಯಲ್ಲಿ ಸಾಧು-ಸಂತರು, ಅನೇಕ ಗಣ್ಯರು ಭಾಗಿ: ಅವರ ಮೇಲೂ ಕೇಸ್ ಹಾಕಲಿ- ಡಿಕೆ ಶಿವಕುಮಾರ್ ಸವಾಲು.

ಬೆಂಗಳೂರು,ಜನವರಿ,10,2022(www.justkannada.in): ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ತಾವು ಸೇರಿ 20 ಜನರ ವಿರುದ್ಧ ಎಫ್ ಐಆರ್ ಹಾಕಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ಧಾರೆ.

ಪಾದಯಾತ್ರೆಯಲ್ಲಿ ಭಾಗವಹಿಸಿದವರು ಸಾವಿರಾರು ಜನ. ಬರೀ ಮೂವತ್ತು ಜನರ ಮೇಲೇಕೆ ಎಫ್.ಐ.ಆರ್? ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರಲ್ಲ?ಅವರ ಮೇಲೆಯೂ ಕೇಸು ಹಾಕಬೇಕು ಕಣ್ರೀ. ಕೇವಲ ಮೂವತ್ತು ಜನರ ಮೇಲೆ ಕೇಸು ಹಾಕಿದರೆ ಏನರ್ಥ? ಪಾದಯಾತ್ರೆಯಲ್ಲಿ ಸಾಧು-ಸಂತರು ಭಾಗವಹಿಸಿದ್ದರು.ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದರು.ಅವರ ಮೇಲೆಲ್ಲಾ ಕೇಸ್  ಹಾಕಲಿ ಎಂದು ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಕೊರೋನಾ ಹೆಚ್ಚಳವಾದರೆ ನಮ್ಮ ಮೇಲೆ ಹೊಣೆ ಹೊರಿಸುವುದಾದರೆ ಹೊರಿಸಲಿ. ಇವರು ಲಂಚ ಹೊಡೆಯುತ್ತಾರಲ್ಲ? ಅದರ ಹೊಣೆ ಯಾರ ಮೇಲೆ ಹೊರಿಸುತ್ತಾರೆ. ಹತ್ತು ಸಾವಿರ ಬೆಡ್ ಗಳನ್ನು ತಂದು ಹತ್ತು ಜನರನ್ನು ಮಲಗಿಸಲಿಲ್ಲವಲ್ಲ?ಇದರ ಹೊಣೆ ಯಾರ ಮೇಲೆ? ಔಷಧ ಖರೀದಿಯ ಹೆಸರಿನಲ್ಲಿ ಕೋಟಿಗಟ್ಟಲೆ ಲೂಟಿ ಮಾಡಿದರಲ್ಲ?ಅದರ ಹೊಣೆ ಯಾರ ಮೇಲೆ? ಲಕ್ಷಾಂತರ ಜನ ಸತ್ತರೂ ನಲವತ್ತು ಸಾವಿರ ಅಂತ ಲೆಕ್ಕ ಕೊಟ್ಟರಲ್ಲ?ಅದರ ಹೊಣೆ ಯಾರ ಮೇಲೆ? ಎಂದು ಪ್ರಶ್ನಿಸಿದರು.

ಜನರಲ್ಲಿ ಕ್ಷಮೆ ಯಾಚಿಸಬೇಕು ಎಂಬ ಗೃಹ ಸಚಿವ ಅಜ್ಞಾನೇಂದ್ರಣ್ಣನ ಮಾತಿನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಾವು  ಜನರಲ್ಲಿ ಯಾಕೆ ಕ್ಷಮೆ ಯಾಚಿಸಬೇಕು? ಏನು ತಪ್ಪು ಮಾಡಿದ್ದೇವೆ ಎಂದು ಕ್ಷಮೆ ಯಾಚಿಸಬೇಕು? ನಿಮಗಾಗಿ ಹೋರಾಟ ಮಾಡುತ್ತಿದ್ದೇವೆ.ಇದು ತಪ್ಪು ಎಂದು ಹೇಳಬೇಕಾ? ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಇವತ್ತು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇವತ್ತು ಬರುತ್ತೇವೆ ಎಂದರು. ಆದರೆ ನಾನೇ ಬೇಡ ಎಂದಿದ್ದೇನೆ.ವಿಶ್ರಾಂತಿ ಪಡೆಯಿರಿ ಎಂದಿದ್ದೇನೆ. ಇವತ್ತು ಸಂಪೂರ್ಣ ವಿಶ್ರಾಂತಿ ಪಡೆದು ನಾಳೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ನಾನು ತಿಹಾರ್ ಜೈಲು ನೋಡಿದ್ದೇನೆ. ಇನ್ನು ರಾಮನಗರ ಜೈಲು ನೋಡಿದರೂ ಪರವಾಗಿಲ್ಲ ಪಾದಯಾತ್ರೆಗೆ ತೊಂದರೆ‌ ಮಾಡಲು ಸರ್ಕಾರದ ಪಿತೂರಿ ನಡೆಸುತ್ತಿದೆ ಎಂದು ಡಿಕೆ ಶಿವಕುಮಾರ್ ಗುಡುಗಿದರು.

Key words: DK Shivakumar- challenge- Government