ಸಂಸತ್ ಸದಸ್ಯ ಸ್ಥಾನದಿಂದ ಅನರ್ಹ: ರಾಜಕೀಯವಾಗಿ ರಾಹುಲ್ ಗಾಂಧಿ ಮುಗಿಸಲು ಹುನ್ನಾರ- ಕೇಂದ್ರದ ವಿರುದ್ದ ಹೆಚ್.ವಿಶ್ವನಾಥ್ ವಾಗ್ದಾಳಿ.

ಮೈಸೂರು,ಮಾರ್ಚ್,25,2023(www.justkannada.in):  ಮಾನಹಾನಿ ಪ್ರಕರಣದಲ್ಲಿ ಅಪರಾಧಿ ಹಿನ್ನೆಲೆ ರಾಹುಲ್ ಗಾಂಧಿ ಅವರನ್ನ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ವಿಚಾರಕ್ಕೆ  ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್, ಇವತ್ತು ದೇಶದ ಕಾಂಗ್ರೆಸ್ ಪಕ್ಷದ ಧುರೀಣ ರಾಹುಲ್ ಗಾಂಧಿ ಅವರ  ಸಂಸತ್ ಸದಸ್ಯ ಸ್ಥಾನವನ್ನಅನರ್ಹ ಗೊಳಿಸಿದ್ದಾರೆ. ಈ ಮೂಲಕ ರಾಜಕೀಯವಾಗಿ ರಾಹುಲ್ ಗಾಂಧಿ ಅವರನ್ನ ಮುಗಿಸಲು ಮುಂದಾಗಿದ್ದಾರೆ. ಇದೆಲ್ಲವನ್ನೂ ದೇಶದ ಜನ ನೋಡುತ್ತಿದ್ದಾರೆ. ಈ ದೇಶದ ಜನತಂತ್ರ ವ್ಯವಸ್ಥೆ ನಗೆ ಪಾಟಲಿಗೆ ಒಳಗಾಗಿದೆ. ಮಾನಹಾನಿ ಕೇಸ್ ನಲ್ಲಿ ಅನರ್ಹ ಗೊಳಿಸುವುದಕ್ಕೋಸ್ಕರ ಶಿಕ್ಷೆ ಹೆಚ್ಚು ಮಾಡಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಕೆಲಸ. ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಮುಗಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದರು.

ಭಾರತ್ ಜೋಡೋ ಯಾತ್ರೆ ಮೂಲಕ ಅವರ ಖ್ಯಾತಿ ಬಹಳ ಹೆಚ್ಚಾಗತೊಡಗಿತು. ಅವರ ನಾಯಕತ್ವವನ್ನು ದೇಶದ ಜನ ಒಪ್ಪಿಕೊಳ್ಳುತ್ತಾ ಹೋದರು. ನಂತರ ಇತ್ತೀಚಿಗೆ ಲಂಡನ್ ನಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ರಾಹುಲ್ ಗಾಂಧಿ ಮಾತನಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕಿರುವ ಬಗ್ಗೆ ಮಾತನಾಡಿದರು. ಇದು ನಮ್ಮ ದೇಶದ ನಾಯಕರಿಗೆ ಇಷ್ಟ ಆಗಿಲ್ಲ. ಅವರಿಗೆ  ಸಂಸತ್ತಿನಲ್ಲಿ ಮಾತನಾಡಲು ಅವಕಾಶವನ್ನ ಕೊಡಲಿಲ್ಲ. ಇವರನ್ನು ಹೇಗಾದರೂ ರಾಜಕೀಯವಾಗಿ ಮುಗಿಸಬೇಕು ಎಂದು ಕೋಲಾರದಲ್ಲಿ ನಡೆದ ಘಟನೆ ಕುರಿತು ಗುಜರಾತ್ ಕೋರ್ಟಿನಲ್ಲಿ ಕೇಸ್ ಹಾಕಿ ಶಿಕ್ಷೆ ಕೊಡಿಸಿರೋದು ಉದ್ದೇಶ ಪೂರ್ವಕ. ಪ್ರಜಾತಂತ್ರ ವ್ಯವಸ್ಥೆಯನ್ನ ಮುಗಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎಂಎಲ್ಸಿ ಎಚ್ ವಿಶ್ವನಾಥ್ ಗುಡುಗಿದರು.

ರಾಹುಲ್ ಗಾಂಧಿ ಹೇಳಿದ ಮಾತು ಸರಿ ಅಂತ ನಾನು ಹೇಳ್ತಾ ಇಲ್ಲ ಅವರು ಮಾತನಾಡುವ ಭರದಲ್ಲಿ ಹೇಳಿದ್ದಾರೆ. ಮೋದಿ ಅವರು ಕಾಂಗ್ರೆಸ್ ಪಕ್ಷವನ್ನ ಟೀಕಿಸುವ ನೆಪದಲ್ಲಿ ಎಷ್ಟು ಬಾರಿ ಹಗುರವಾಗಿ ಮಾತನಾಡಿದ್ದಾರೆ. ಆದರೆ, ಅವರನ್ಮ ಈಗಲೇ ರಾಜಕೀಯವಾಗಿ ಮುಗಿಸಬೇಕು ಅಂತ ಪಿತೂರಿ ಮಾಡಿದ್ದಾರೆ. ಸಂಸತ್ತಿನಲ್ಲಿ 54% ಜನ ಕ್ರಿಮಿನಲ್ ಗಳಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯನವರನ್ನ ಮುಗಿಸುಬಿಡಿ ಅಂತಾರೆ. ಅಂತವರ ಮೇಲೆ ಒಂದೇ ಒಂದು ಎಫ್ ಐಆರ್ ಆಗಿಲ್ಲ. ಯತ್ನಾಳ್ ಬಾಯಿಗೆ ಬಂದಾಗೆ ಮಾತಾಡುತ್ತಾರೆ. ಇವರ ಮೇಲೂ ಕ್ರಮ ತೆಗೊಳ್ಳಲ್ಲ. ಹಾಗಾದರೆ, ದೇಶದಲ್ಲಿ ಒಬ್ಬರಿಗೊಂದು ಕಾನೂನಿದೆಯಾ? ಕಾನೂನು ಎಲ್ಲಿರಿಗೂ ಒಂದೇ. ಮಾಡಾಳ್ ವಿರೂಪಾಕ್ಷಪ್ಪ ನನ್ನ ಯಾಕೆ ಇನ್ನೂ ಬಂಧಿಸಿಲ್ಲ.? ನಾನು ಸಂಸದೀಯ ಮಂಡಳಿಗೆ ಕೈಮುಗಿದು ಕೇಳುತ್ತೇನೆ. ಸಂಸತ್ತಿನಲ್ಲಿರುವ 54% ಸಂಸದರ ಮೇಲೆ ದೋಷಾರೋಪಣೆಗಳಿವೆ. ಅವರ ಮೇಲೆ ಕ್ರಮ  ತೆಗೆದುಕೊಳ್ಳಿ. ಯಾಕೆ ಈ ಇಬ್ಬಗೆ ನೀತಿ. ಹೇಗೆ ರಾಹುಲ್ ಗಾಂಧಿ ಮೇಲೆ ಕ್ರಮ ತಗೋಂಡ್ರಿ ಹಾಗೆ ಇನ್ನುಳಿದವರ ಮೇಲೂ ಕ್ರಮ ತೆಗೆದುಕೊಂಡು ಅವರನ್ನೂ ಅನರ್ಹಗೊಳಿಸಿ ಎಂದು ಒತ್ತಾಯಿಸಿದರು.

 ದೇಶದ ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಧಾನ ವ್ಯಕ್ತಪಡಿಸಿದ ವಿಶ್ವನಾಥ್.

ಮೋದಿ ವಿರುದ್ಧ ಮಾತನಾಡಿದರೆ ಅದು ಇಂದು ದೇಶದ್ರೋಹವಾಗುತ್ತೆ. ಏನಿದು ವ್ಯವಸ್ಥೆ, ಎಲ್ಲಿದ್ದೇವೆ ನಾವು, ಎತ್ತ ಕಡೆ ದೇಶ ಹೋಗುತ್ತಿದೆ.? ದೇಶದಲ್ಲಿ ಕೊಳ್ಳೆ ಹೊಡೆದು ಹೊರದೇಶಗಳಿಗೆ ಹೋದವರಿಗೆ ಕ್ರಮ ಇಲ್ಲ. ನ್ಯಾಯಾಂಗದ ಮೇಲೆ ದೇಶದ ಜನರಿಗೆ ನಂಬಿಕೆ ಹೋದರೆ ಬೀದಿ ಬೀದಿಯಲ್ಲಿ ಹೆಣಗಳು ಉದುರುತ್ತವೆ ಎಂದು ಹೇಳುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆ ಕುರಿತು ಹೆಚ್. ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದರು.

Key words: Disqualified –MP-finish -Rahul Gandhi- politically- H. Vishwanath